6 ತಿಂಗಳಿನಿಂದ ಈಚೆಗೆ ಅನರ್ಹರಿಗೆ ಸರಕಾರಿ ಜಮೀನು ಮಂಜೂರಾಗಿದ್ದರೆ ಕ್ರಮ: ಸಚಿವ ಕೃಷ್ಣ ಬೈರೇಗೌಡ

Update: 2023-06-10 15:47 GMT

ಬೆಂಗಳೂರು, ಜೂ.10: ‘ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಆರು ತಿಂಗಳಿನಿಂದ ಈಚೆಗೆ ಅನರ್ಹರಿಗೆ ಸರಕಾರಿ ಜಮೀನು ಮಂಜೂರು ಮಾಡಿದ್ದರೆ, ಅವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಭೂ ಮಂಜೂರಾತಿ ಪ್ರಕರಣಗಳ ಕುರಿತು ತನಿಖೆ ಕೈಗೊಳ್ಳಲಾಗಿದೆ. ಯಾವ ಕಾರಣಕ್ಕೆ ಸಂಘ-ಸಂಸ್ಥೆಗಳಿಗೆ ಸರಕಾರಿ ಭೂಮಿಗಳನ್ನು ಮಂಜೂರು ಮಾಡಲಾಗಿದೆ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಒಂದು ವೇಳೆ ನಿಯಮ ಮೀರಿ ಭೂಮಿ ನೀಡಿದ್ದರೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಅದು ಅಲ್ಲದೆ, ಈ ಹಿಂದಿನ ಬಿಜೆಪಿ ಸರಕಾರ ಚುನಾವಣೆ ವೇಳಗೆ ತೆಗೆದುಕೊಂಡ ನಿರ್ಧಾರಗಳನ್ನು ಸದ್ಯಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೂಚನೆ ನೀಡಿದ್ದಾರೆ. 2022ರ ಡಿಸೆಂಬರ್‍ನಿಂದ ಈಚೆಗೆ ಸಂಘ-ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಭೂಮಿ ಪಡೆದ ಸಂಘ-ಸಂಸ್ಥೆಗಳು ತಾವು ಪಡೆದ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುವುದು. ಶೈಕ್ಷಣಿಕ ಉದ್ದೇಶಕ್ಕೆ ಭೂಮಿ ಪಡೆದಿದ್ದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಎಲ್ಲ ವಿಚಾರದಲ್ಲಿಯೂ ನಾವು ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಕೃಷ್ಣಬೈರೇಗೌಡ ಸ್ಪಷ್ಟಣೆ ನೀಡಿದರು.

Similar News