×
Ad

ಉಪ್ಪಿನಂಗಡಿ: ಕಾರಿನಲ್ಲಿ ಬಂದ ತಂಡದಿಂದ ಟ್ಯಾಂಕರ್ ತಡೆದು ದರೋಡೆ; ಪ್ರಕರಣ ದಾಖಲು

Update: 2023-06-10 22:51 IST

ಉಪ್ಪಿನಂಗಡಿ: ಕಾರಿನಲ್ಲಿ ಬಂದ ತಂಡವೊಂದು ಟ್ಯಾಂಕರ್ ಚಾಲಕನಿಗೆ ಹಲ್ಲೆಗೈದು, ನಗದು ಹಣ ಸಹಿತ ದಾಖಲೆ ಪತ್ರಗಳನ್ನು ದೋಚಿದ ಘಟನೆ ಶುಕ್ರವಾರ ತಡರಾತ್ರಿ ಶಿರಾಡಿ ಗ್ರಾಮದ ಗಡಿ ದೇವಸ್ಥಾನದ ಬಳಿ ನಡೆದಿದೆ.

ಹಲ್ಲೆಗೆ ಒಳಗಾದ ಟ್ಯಾಂಕರ್ ಚಾಲಕನನ್ನು ಸುರತ್ಕಲ್ ನಿವಾಸಿ 61ರ ಹರೆಯದ ಅಸ್ಕರ್ ವಿನ್ಸೆಂಟ್ ಸೋನ್ಸ್ ಎಂದು ಗುರುತಿಸಲಾಗಿದೆ. ಹಲ್ಲೆಯಿಂದ ಇವರ ಕೈ, ಬಾಯಿ ಹಾಗೂ ಕಣ್ಣಿಗೆ ಹಾನಿಯಾಗಿದ್ದು, ಅವರ ಪರ್ಸ್ ನಲ್ಲಿದ್ದ 6000 ರೂ. ಹಣವನ್ನು ದರೋಡೆಕೋರರು ದೋಚಿದ್ದಾರೆ.

ಮಂಗಳೂರಿನ ಕೂಳೂರಿನಿಂದ ಡಾಂಬಾರು ತುಂಬಿದ ಟ್ಯಾಂಕರನ್ನು ಕ್ಲೀನರ್ ನೊಂದಿಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಖಾಸಗಿ ಬಸ್ಸೊಂದರಿಂದ ಇಳಿದ ವ್ಯಕ್ತಿಯೋರ್ವ ತನ್ನ ಟ್ಯಾಂಕರನ್ನು ನಿಲ್ಲಿಸಲು ಸೂಚಿಸಿದ್ದು, ನಿಲ್ಲಿಸಲು ನಿರಾಕರಿಸಿದಾಗ  ಕೆಎ 19 ಎಂಇ 7353 ನಂಬರ್ ಪ್ಲೇಟ್ ಅಳವಡಿಸಿದ್ದ ಫಾರ್ಚೂನರ್ ಕಾರೊಂದನ್ನು ಅದರ ಚಾಲಕ ನಮ್ಮ ಟ್ಯಾಂಕರ್ ಗೆ  ಅಡ್ಡವಾಗಿ  ನಿಲ್ಲಿಸಿ, ಕಾರಿನಲ್ಲಿದ್ದ ಮೂವರು ಬಂದು ಟ್ಯಾಂಕರ್ ಕ್ಯಾಬಿನ್ ಒಳಗೆ ಪ್ರವೇಶಿಸಿ ನನ್ನಲ್ಲಿದ್ದ  6000 ರೂ. ಹಣ ಇದ್ದ ಪರ್ಸ್, ವಾಹನ ಚಾಲನಾ ಪರವಾನಿಗೆ ಸಹಿತ ಟ್ಯಾಂಕರ್‍ಗೆ ಸಂಬಂಧಿಸಿದ ದಾಖಲೆಗಳನ್ನು, ಬಿಲ್‍ಗಳನ್ನು ಕಿತ್ತುಕೊಂಡೊಯ್ದಿರುವುದಲ್ಲದೆ, ನನ್ನನ್ನು ಟ್ಯಾಂಕರ್ ನಿಂದ ಕೆಳಗೆ ಎಳೆದು ಹಾಕಿ ನನಗೆ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿರುತ್ತಾರೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಿರುತ್ತಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Similar News