ದುರ್ಬಲರ ಒಳಗೊಳ್ಳುವ ಅಭಿವೃದ್ಧಿಗೆ ಪೂರಕ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ

Update: 2023-06-11 08:50 GMT

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿ ದಮನಿತರು ಮತ್ತು ಬಡವರ ಭಾಗ್ಯದ ಬಾಗಿಲನ್ನು ತೆರೆಯುವ ದೃಢಸಂಕಲ್ಪಮಾಡಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಜಾತಿ ಗಣತಿ ಸಮೀಕ್ಷೆಯು ಪ್ರಬಲ ಸಮುದಾಯಗಳ ಏಕಸ್ವಾಮ್ಯವನ್ನು ಸಹಜವಾಗಿ ನಗಣ್ಯಗೊಳಿಸುತ್ತದೆ. 


ಭಾರತದಲ್ಲಿ ಸಾಮಾಜಿಕ ನ್ಯಾಯದ ರೂವಾರಿಗಳು ದಮನಿತ ಸಮುದಾಯಗಳಿಗೆ ರಕ್ಷಣಾತ್ಮಕ ತಾರತಮ್ಯ ಮತ್ತು ಸಬಲೀಕರಣದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯ ಎಲ್ಲ ವಾರಸುದಾರರು ಸಾಂವಿಧಾನಿಕ ನಿಬಂಧನೆಗಳನ್ನು ಜಾರಿಗೊಳಿಸದಿದ್ದರೆ ಕಲ್ಯಾಣ ರಾಷ್ಟ್ರ ಸ್ಥಾಪನೆಯ ಕನಸು ನನಸಾಗುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ನ್ಯಾಯವಿತರಣೆಯ ಹೊಸ ಯುಗವನ್ನು ಆರಂಭಿಸಿದರು. ಅಂದು ದಿವಾನ್ ವಿಶ್ವೇಶ್ವರಯ್ಯ ಬ್ರಾಹ್ಮಣ್ಯದ ಪ್ರಭಾವದಿಂದಾಗಿ ದುರ್ಬಲರಿಗೆ ಮೀಸಲು ಸೌಲಭ್ಯ ನೀಡುವುದನ್ನು ಪ್ರಬಲವಾಗಿ ವಿರೋಧಿಸಿದರು. ಆದರೆ, ನಾಲ್ವಡಿಯವರು ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿಯದೆ ಮೈಸೂರು ಸಂಸ್ಥಾನ ದುರ್ಬಲ ವರ್ಗಗಳ ವಿಮೋಚನೆ ಮತ್ತು ಪ್ರಗತಿಗಳಿಗೆ ಬದ್ಧವಾಗಿದೆಯೆಂದು ಘೋಷಿಸಿ ಮಹಿಳೆಯರು ಮತ್ತು ದುರ್ಬಲ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕಾರಣ ಕ್ಷೇತ್ರಗಳಲ್ಲಿ ನ್ಯಾಯೋಚಿತ ಅವಕಾಶಗಳನ್ನು ಕಲ್ಪಿಸಿಕೊಟ್ಟು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಂದ ರಾಜರ್ಷಿ ಎಂಬ ಗೌರವಕ್ಕೆ ಭಾಜನರಾದರು. ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕದ ರಾಜಕಾರಣ ಪ್ರಬಲ ಸಮುದಾಯಗಳ ಏಕಸ್ವಾಮ್ಯಕ್ಕೆ ಗುರಿಯಾಗಿದ್ದು ದುರ್ಬಲರು ಬಹುಜನರಾಗಿದ್ದರೂ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯೋಚಿತ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಲಿಲ್ಲ. ಇದುವರೆಗೂ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರು ಸಂಖ್ಯಾಬಲದಲ್ಲಿ ತಾವೇ ಹೆಚ್ಚಾಗಿರುವುದಾಗಿ ಪ್ರತಿಪಾದಿಸಿ ಶಿಕ್ಷಣ, ಉದ್ಯೋಗ ಮತ್ತು ರಾಜಕಾರಣಗಳಲ್ಲಿ ಪ್ರಕೃತಿ ಧರ್ಮ ಮತ್ತು ಸಾಂವಿಧಾನಿಕ ನಿಬಂಧನೆಗಳಿಗೆ ವಿರುದ್ಧವಾಗಿ ಸಿಂಹಪಾಲು ಪಡೆದಿದ್ದಾರೆ. ಇವರು ನಿಜವಾದ ಅರ್ಥದಲ್ಲಿ ಬಹುಸಂಖ್ಯಾತರೂ ಅಲ್ಲ, ಪ್ರಬಲರೂ ಅಲ್ಲ. ಇಂತಹ ಸ್ವಯಂಘೋಷಿತ ಪ್ರಬಲರಿಂದ ನಿಜವಾಗಿಯೂ ಬಹುಸಂಖ್ಯಾತರಾದ ಪರಿಶಿಷ್ಟರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳು ಅಂಚಿಗೆ ನೂಕಲ್ಪಟ್ಟಿದ್ದಾರೆ. ಅಲ್ಲದೆ ಪ್ರಬಲ ರಾಜಕೀಯ ಮಾದರಿ ಮತ್ತು ಅಭಿವೃದ್ಧಿ ಮಾದರಿಗಳ ಮೊದಲ ಬಲಿಪಶುಗಳಾಗಿದ್ದಾರೆ. ಇದುವರೆಗೂ ರಾಜ್ಯವನ್ನಾಳಿದ ಬಹುತೇಕ ಮುಖ್ಯಮಂತ್ರಿಗಳು ಮೇಲ್ಜಾತಿ ಪ್ರಭುತ್ವದ ವಕ್ತಾರರಾಗಿ ತಳಸಮುದಾಯಗಳನ್ನು ನಿರ್ಲಕ್ಷಿಸಿದ್ದಾರೆ.

ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮತ್ತು ಸಿದ್ದರಾಮಯ್ಯ ಪ್ರೀತಿ ಮತ್ತು ನಿರ್ಭೀತಿಗಳಿಂದ ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ನಿರ್ಣಾಯಕ ಕೊಡುಗೆ ಕೊಟ್ಟಿದ್ದಾರೆ. ಇವರು ಧರಂಸಿಂಗ್, ಬಂಗಾರಪ್ಪ, ವೀರಪ್ಪಮೊಯ್ಲಿ ಮೊದಲಾದ ಮುಖ್ಯಮಂತ್ರಿಗಳಂತೆ ಶಕ್ತಿರಾಜಕಾರಣವನ್ನು ಮುಂದುವರಿಸದೆ ಸಾಮಾಜಿಕ ನ್ಯಾಯಪರ ರಾಜಕಾರಣ ಮತ್ತು ಅಭಿವೃದ್ಧಿಗಳಿಗೆ ವಿಶೇಷ ಮಹತ್ವ ನೀಡಿ ನಾಡಿನ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಗಳಿಸಿದ್ದಾರೆ. ಸಿದ್ದರಾಮಯ್ಯನವರು 2013-18ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕಾಂತರಾಜುರವರ ನೇತೃತ್ವದಲ್ಲಿ ನಡೆಸಿದರು. ಇದರ ಮುಖ್ಯ ಉದ್ದೇಶ ಜಾತಿ ಸಮೀಕರಣದ ಲೆಕ್ಕಾಚಾರವನ್ನೇ ತಲೆ ಕೆಳಗು ಮಾಡಿ ನಿಜವಾದ ಅರ್ಥದಲ್ಲಿ ಬಹುಜನರಾದ ಪರಿಶಿಷ್ಟರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯೋಚಿತ ಪ್ರಾತಿನಿಧ್ಯವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಕೊಡಬೇಕೆಂಬುದೇ ಇತ್ತು. ಕಾಂತರಾಜ್ ಸಮಿತಿ 2015ರಲ್ಲಿ ಜಾತಿ ಗಣತಿ ಸಮೀಕ್ಷೆಯನ್ನು ಆರಂಭಿಸಿ 2016ರಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿ ಸುಮಾರು 20 ಸಂಪುಟಗಳುಳ್ಳ ವರದಿಯನ್ನು 158.47 ಕೋಟಿ ರೂ.ವೆಚ್ಚದಲ್ಲಿ ಸಲ್ಲಿಸಿತು. ಸುಮಾರು 1,351 ಅಲಕ್ಷಿತ ಜಾತಿಗಳನ್ನು ಪರಿಗಣಿಸಿ 192 ಹೊಸ ಜಾತಿಗಳನ್ನು ಸೇರ್ಪಡೆಗೊಳಿಸಿ ವರದಿಯನ್ನು ಸಲ್ಲಿಸಿತು. ಇದು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯವಿತರಣೆ, ರಾಜಕೀಯ ಪ್ರಾತಿನಿಧ್ಯ ಮತ್ತು ಒಳಗೊಳ್ಳುವ ಅಭಿವೃದ್ಧಿ ದೃಷ್ಟಿಯಿಂದ ಒಂದು ಮೈಲಿಗಲ್ಲು ಎಂದೇ ಹೇಳಬಹುದು.

ವಾಸ್ತವವಾಗಿ, ಹೊಸ ಸಮೀಕ್ಷಾ ವರದಿಯಲ್ಲಿ ಜಾತಿಗಳ ಸಂಖ್ಯಾ ಬಲ ಏರುಪೇರಾಗಿದೆ. ಈ ವರದಿ ಬಿಡುಗಡೆಯಾದರೆ ರಾಜಕೀಯವಾಗಿ ಹಿನ್ನಡೆಯುಂಟಾಗುವ ಆತಂಕವನ್ನು ಬಿಜೆಪಿ ಮತ್ತು ಜನತಾದಳಗಳು ಹೊಂದಿವೆ. ಅಂದು ಸಿದ್ದರಾಮಯ್ಯನವರ ಸರಕಾರಕ್ಕೆ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಲು ಸ್ಥಾಪಿತ ಹಿತಾಸಕ್ತಿಗಳು ಹಲವಾರು ಅಡೆತಡೆಗಳನ್ನು ಸೃಷ್ಟಿ ಮಾಡಿದ್ದರು. ಆನಂತರ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಅಧಿಕಾರ ಗಳಿಸಿದ ಬಿಜೆಪಿ ಸರಕಾರ ದುರ್ಬಲ ಸಮುದಾಯಗಳನ್ನು ಎಂದಿನಂತೆ ತುಳಿದು ಪ್ರಬಲ ಸಮುದಾಯಗಳಿಗೆ ಅಧಿಕಾರವನ್ನು ಮುಂದುವರಿಸುವ ಉದ್ದೇಶದಿಂದ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡುವ ಅಥವಾ ಅನುಷ್ಠಾನಗೊಳಿಸುವ ಕೆಲಸಕ್ಕೆ ಮುಂದೆ ಬರಲಿಲ್ಲ. ಸುಮಾರು 6 ಕೋಟಿ ಜನಸಂಖ್ಯೆಯುಳ್ಳ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ 1.08ಕೋಟಿ, ಪರಿಶಿಷ್ಟ ಪಂಗಡ 40.45 ಲಕ್ಷ, ಮುಸ್ಲಿಮರು 70 ಲಕ್ಷ, ಕುರುಬರು 45 ಲಕ್ಷ ಮತ್ತು ಇತರ ಹಿಂದುಳಿದ ಸಮುದಾಯಗಳು 70ಲಕ್ಷ ಇರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಬ್ರಾಹ್ಮಣರು 14ಲಕ್ಷ, ಲಿಂಗಾಯತರು 65ಲಕ್ಷ ಮತ್ತು ಒಕ್ಕಲಿಗರು 60 ಲಕ್ಷ ಒಟ್ಟು 1.39 ಕೋಟಿ ಇದ್ದಾರೆ. ಸಂಖ್ಯಾಬಲದಲ್ಲಿ ಮೊದಲ ಸ್ಥಾನದಲ್ಲಿ ಪರಿಶಿಷ್ಟರು, ಎರಡನೇ ಸ್ಥಾನದಲ್ಲಿ ಹಿಂದುಳಿದವರು ಮತ್ತು ಮೂರನೇ ಸ್ಥಾನದಲ್ಲಿ ಅಲ್ಪಸಂಖ್ಯಾತರು ಇದ್ದು ನಿಜವಾದ ಅರ್ಥದಲ್ಲಿ ಬಹುಸಂಖ್ಯಾತರಾಗಿದ್ದಾರೆ. ಈ ವರ್ಗಗಳಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಲಭಿಸಬೇಕಾದ ನ್ಯಾಯೋಚಿತ ಅವಕಾಶಗಳನ್ನು ಒದಗಿಸಲು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದ್ದು ನಾಡಿನಲ್ಲಿ ಹೊಸ ರಾಜಕೀಯ-ಆರ್ಥಿಕ ಮನ್ವಂತರಕ್ಕೆ ನಾಂದಿ ಹಾಡಿದೆ.

ಇತ್ತೀಚಿನ ಚುನಾವಣೆಯಲ್ಲಿ ಕರ್ನಾಟಕದ ಪ್ರಜ್ಞಾವಂತ ಮತದಾರರು (ವಿಶೇಷವಾಗಿ ಬಹುಜನ ಅಹಿಂದ ಸಮುದಾಯಗಳು) ಬಿಜೆಪಿಯ ಭ್ರಷ್ಟಾಚಾರ ಮತ್ತು ದುರಾಚಾರಗಳಿಂದ ಬಸವಳಿದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಾಧಿಕಾರ ನೀಡಿದರು. ಸಿದ್ದರಾಮಯ್ಯನವರು ಈ ಸಮೀಕ್ಷೆ ಪರವಾಗಿ ಸಂದರ್ಭಾನುಸಾರ ಮಾತನಾಡಿ ತಮ್ಮ ಸಾಮಾಜಿಕ ನ್ಯಾಯಪರ ನಿಲುವನ್ನು ದಿಟ್ಟವಾಗಿ ಪ್ರತಿಪಾದಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಾಡಿನ ದುರ್ಬಲ ವರ್ಗಗಳ ಬದುಕನ್ನು ಹಸನಾಗಿಸುವ ಸಲುವಾಗಿ ಐದು ಭಾಗ್ಯಗಳನ್ನು ದಿಟ್ಟ ಚಿಂತನೆ ಮತ್ತು ಸಿದ್ಧತೆಗಳಿಂದ ಬಿಡುಗಡೆ ಮಾಡಿದ್ದಾರೆ. ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿ ದಮನಿತರು ಮತ್ತು ಬಡವರ ಭಾಗ್ಯದ ಬಾಗಿಲನ್ನು ತೆರೆಯುವ ದೃಢಸಂಕಲ್ಪಮಾಡಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಜಾತಿ ಗಣತಿ ಸಮೀಕ್ಷೆಯು ಪ್ರಬಲ ಸಮುದಾಯಗಳ ಏಕಸ್ವಾಮ್ಯವನ್ನು ಸಹಜವಾಗಿ ನಗಣ್ಯಗೊಳಿಸುತ್ತದೆ.

Similar News