ಕ್ಷಯ ಮುಕ್ತ ಭಾರತ ನಿರ್ಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಡಾ. ಬದ್ರುದ್ದೀನ್
ಪುತ್ತೂರು; ಮನುಷ್ಯನನ್ನು ಅತ್ಯಂತ ಹೆಚ್ಚು ಕಾಡುವ ಮಾರಕ ರೋಗಗಳಲ್ಲಿ ಕ್ಷಯವೂ ಒಂದಾಗಿದೆ. ಸುಮಾರು 6 ಸಾವಿರ ವರ್ಷಗಳಷ್ಟು ಹಳೆಯದಾದ ಈ ರೋಗವನ್ನು ತಡೆಗಟ್ಟುವಲ್ಲಿ ನಾವು ಯಶಸ್ವಿಯಾಗಬೇಕಾಗಿದೆ. ಕೇಂದ್ರ ಸರ್ಕಾರ 2025ಕ್ಕೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತೀ ಅಗತ್ಯ ಎಂದು ದ.ಕ. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಹೇಳಿದರು
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ಪತ್ರಿಕಾಭವನದಲ್ಲಿ ಮಂಗಳವಾರ ನಡೆಸಲಾದ `ಕ್ಷಯ ಮುಕ್ತ ಭಾರತ-ಮಾಹಿತಿ' ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಕ್ಷಯ ಎಂಬ ರೋಗ ವಂಶಪಾರಂಪರ್ಯವಾಗಿ ಬರುವುದಿಲ್ಲ. ಕ್ಷಯ ರೋಗದ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ರೋಗ ನಿವಾರಣೆಗೆ ಪರಿಶುದ್ಧ ವಾತಾವರಣದ ಜತೆಗೆ ಸಮರ್ಪಕವಾದ ವೈದ್ಯಕೀಯ ಚಿಕಿತ್ಸೆ ಅಗತ್ಯ. ಈಗ ಈ ರೋಗ ಪತ್ತೆಗೆ ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ಕೇವಲ 2 ಗಂಟೆಯೊಳಗೆ ವ್ಯಕ್ತಿಗೆ ಕ್ಷಯ ರೋಗ ಇದೆಯಾ ಅಥವಾ ಇಲ್ಲ ಎಂಬುವುದನ್ನು ಕಂಡು ಹಿಡಿಯಲು ಸಾಧ್ಯ. ಅಪೌಷ್ಟಿಕತೆ, ದುಶ್ಚಟಕ್ಕೆ ಬಲಿಯಾದ ವ್ಯಕ್ತಿಗಳಿಂದ ಈ ರೋಗ ಹೆಚ್ಚಾಗಿ ಹರಡುತ್ತಿದೆ. ಈ ಬಗ್ಗೆ ಅರಿವು ಮೂಡಿಸಲು ಗ್ರಾಮಮಟ್ಟದಲ್ಲಿಯೂ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪತ್ರಕರ್ತರು ಆರೋಗ್ಯಪೂರ್ಣವಾಗಿದ್ದಾಗ ಮಾತ್ರ ಸಮಾಜವನ್ನೂ ಆರೋಗ್ಯಪೂರ್ಣ ವಾಗಿಸಲು ಸಾಧ್ಯವಾಗುತ್ತದೆ. ಧಾವಂತ ಒತ್ತಡಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಆರೋಗ್ಯ ಸಮಸ್ಯೆ ಕಾಡುವುದು ಹೆಚ್ಚಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಪತ್ರಕರ್ತರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘದ ಪುತ್ತೂರು ಘಟಕ ಆಯೋಜಿಸಿದ ಆರೋಗ್ಯ ಮಾಹಿತಿ ಕಾರ್ಯಾಗಾರವು ಹೆಚ್ಚು ಪ್ರಸ್ತುತವಾಗಿದೆ ಎಂದರು.
ಗ್ರಾಮೀಣ ಪತ್ರಕರ್ತರನ್ನೂ ಸೇರಿಸಿ ರಾಜ್ಯದ ಪತ್ರಕರ್ತರ ಭವಿಷ್ಯದ ದೃಷ್ಟಿಯಿಂದ ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಮುಂದಿನ ಬಜೆಟ್ ನಲ್ಲಿ ಪತ್ರಕರ್ತರಿಗೆ ವಿಶೇಷ ಕೊಡುಗೆ ನೀಡುವಂತೆ ಆಗ್ರಹಿಸಲಾಗಿದೆ. ಇದರೆ ಜತೆಗೆ ಪತ್ರಕರ್ತರು ಹಾಗೂ ಅವರ ಕುಟುಂಬದ ಆರೋಗ್ಯ ರಕ್ಷಣೆ, ಉಚಿತ ಬಸ್‍ಪಾಸ್ ವ್ಯವಸ್ಥೆ, ನಿವೇಶನ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವ ಕುರಿತು ಆಗ್ರಹ ಮಾಡಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಾನಂದ ತಗಡೂರು ಅವರು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮಾಡಿದರು.
ದ.ಕ.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಕಚೇರಿ ಸಂಯೋಜಕ ಮನೋಜ್ ಅವರು ಮಾತನಾಡಿ ಕ್ಷಯ ರೋಗದ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಖಾಸಗಿಯಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಶಾಲೆಗಳು, ಸಮುದಾಯ ಸಂಘಟನೆಗಳಿಗೂ ಕ್ಷಯ ರೋಗದ ಅರಿವು ಮೂಡಿಸುವ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತದೆ. ಕ್ಷಯ ರೋಗ ನಿಯಂತ್ರದಲ್ಲಿ ಮಾದ್ಯಮಗಳ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಪುತ್ತೂರು ಘಟಕದ ಅಧ್ಯಕ್ಷ ಸಿದ್ದೀಕ್ ನೀರಾಜೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಜೆ.ಪಿ, ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಜಿಲ್ಲಾ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಬೀದರ್ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಉಪಸ್ಥಿತರಿದ್ದರು.
ಸಂಘದ ಪುತ್ತೂರು ಘಟಕದ ಸದಸ್ಯ ಸುಧಾಕರ್ ಸುವರ್ಣ ತಿಂಗಳಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ರೈ ಕುತ್ಯಾಳ ವಂದಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.