ಉಳ್ಳಾಲ: ಮುನ್ನೂರು ಗ್ರಾ ಪಂ. ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಮಹಿಳೆಯರು
ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯತ್ ಗೆ ಎರಡನೇ ಹಂತದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಟಗೊಂಡ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಲಭಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಪ್ರಕಟಗೊಂಡ ಮೀಸಲಾತಿಯಡಿಯಲ್ಲಿ ಅಧಿಕಾರ ಪಡೆಯಲು ಮೂವರು ಮಹಿಳಾ ಅಭ್ಯರ್ಥಿಗಳಿದ್ದು ಅಧಿಕಾರ ಯಾರ ಪಾಲಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಪಂಚಾಯತ್ ಮಹಿಳಾ ಸದಸ್ಯರ ಪೈಕಿ ಜಮೀಲ, ವಿಶಾಲಾಕ್ಷಿ ಮತ್ತು ರೆಹನಾಬಾನು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಸರದಿ ಸಾಲಿನಲ್ಲಿ ರುವ ಅರ್ಹ ಮಹಿಳೆಯರು.
ಇಲ್ಲಿನ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 10 , ಎಸ್ ಡಿಪಿಐ 1, ಕಮ್ಯುನಿಸ್ಟ್ 3 ಮತ್ತು 9 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ.
ಮೊದಲ ಹಂತದಲ್ಲಿ ಕಾಂಗ್ರೆಸ್ ಮತ್ತು ಸಿಪಿಐಎಂ ಬೆಂಬಲಿತ ಸದಸ್ಯರು ಜಂಟಿಯಾಗಿ ಅಧಿಕಾರ ಪಡೆದುಕೊಂಡಿದ್ದರು.ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಮತ್ತು ಉಪಾಧ್ಯಕ್ಷ ಸ್ಥಾನ ಸಿಪಿಐಎಂ ಬೆಂಬಲಿತ ಸದಸ್ಯರು ಪಡಕೊಂಡಿದ್ದರು.
ಮೊದಲ ಹಂತದಲ್ಲಿ ಹಿಂದುಳಿದ ವರ್ಗ ಬಿ ಅಧ್ಯಕ್ಷ ಸ್ಥಾನಕ್ಕೆ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ವಿಲ್ಪ್ರೆಡ್ ಡಿಸೋಜ ಅಧ್ಯಕ್ಷ ರಾಗಿ ಸಿಪಿಐಎಂ ಬೆಂಬಲಿತ ಸದಸ್ಯೆ ರಾಜೇಶ್ವರಿ ಉಪಾಧ್ಯಕ್ಷೆ ಆಗಿ ಅಧಿಕಾರ ಗಿಟ್ಟಿಸಿಕೊಡಿದ್ದರು.
ಗ್ರಾಪಂ ಚುನಾವಣೆ ಮೊದಲು ಈ ಗ್ರಾಮದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ, ಚುನಾವಣೆ ಬಳಿಕ ಮೊದಲ ಹಂತದಲ್ಲಿ ಹಿಂದುಳಿದ ವರ್ಗ ಬಿ ಮೀಸಲಾತಿ ಪ್ರಕಟ ಗೊಂಡಿದ್ದ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಸಾಮಾನ್ಯ ವರ್ಗಕ್ಕೆ ಬರಬಹುದು ಎಂಬ ನಿರೀಕ್ಷೆ ಪಂಚಾಯತ್ ಸದಸ್ಯ ರಲ್ಲಿತ್ತು. ಇದೀಗ ಅಧ್ಯಕ್ಷ ಸ್ಥಾನಕ್ಕೆ
ಹಿಂದುಳಿದ ವರ್ಗ ಎ ಮಹಿಳೆಗೆ ಬಂದಿರುವುದರಿಂದ ಕಾಂಗ್ರೆಸ್ ಬೆಂಬಲಿತ ಮೂವರು ಮಹಿಳಾ ಸದಸ್ಯರಿದ್ದರೂ , ಮೊದಲ ಹಂತದಲ್ಲಿ ಉಪಾಧ್ಯಕ್ಷ ಆಗಿದ್ದ ಸಿಪಿಐಎಂ ಬೆಂಬಲಿತ ಸದಸ್ಯೆ ರಾಜೇಶ್ವರಿ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಮಹಿಳೆ ಆಗಿದ್ದಾರೆ. ಎರಡೂ ಪಕ್ಷಗಳ ಬೆಂಬಲಿತ ಸದಸ್ಯರನ್ನು ಕ್ರೂಢೀಕರಿಸಿದರೆ ಒಟ್ಟು ನಾಲ್ವರು ಅರ್ಹರು ಇದ್ದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಪೈಪೋಟಿ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಮೊದಲ ಹಂತದಲ್ಲಿ ಕಾಂಗ್ರೆಸ್ ಸಿಪಿಐಎಂ ಜಂಟಿಯಾಗಿ ಅಧಿಕಾರದ ಗದ್ದುಗೆ ಏರಿ ಅಧಿಕಾರ ಹಂಚಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಎರಡು ಪಕ್ಷಗಳ ಬೆಂಬಲಿತ ಸದಸ್ಯರಲ್ಲಿ ಪೈಪೋಟಿ ನಡೆಯಬಹುದೇ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಈ ಬಗ್ಗೆ ಸಭೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರುವ ಬಗ್ಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಈಗಾಗಲೇ ತೀರ್ಮಾನಿಸಿದ್ದಾರೆ. ಆದರೆ ಕಾಂಗ್ರೆಸ್ ಬೆಂಬಲಿತ ರ ಸಂಖ್ಯೆ ಕಡಿಮೆ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಮತದಾನ ಪ್ರಕ್ರಿಯೆ ನಡೆದರೆ ಅಧ್ಯಕ್ಷೆ ಪಟ್ಟ ಯಾರಿಗೆ ಒಲಿದು ಬಹುದು ಎಂಬ ಪ್ರಶ್ನೆ ಎಲ್ಲರ ಮುಂದಿದೆ.