ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ | ಆರೋಪಿ ದೋಷಮುಕ್ತ: CBI ನ್ಯಾಯಾಲಯ ತೀರ್ಪು
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ಇಂದು (ಜೂ.16) ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್‌ರನ್ನು ಖುಲಾಸೆ ಮಾಡಿದೆ.
ಧರ್ಮಸ್ಥಳ ಗ್ರಾಮದ ಚಂದಪ್ಪ ಗೌಡ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯಾ 2012 ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗ ಬರುವಾಗ ನಾಪತ್ತೆಯಾಗಿದ್ದು ಮಾರನೇ ದಿನ ಆಕೆಯ ಮೃತದೇಹ ಅತ್ಯಾಚಾರವೆಸಗಿ ಕೊಲೆ ಮಾಡಿದ ರೀತಿಯಲ್ಲಿ ಪತ್ತೆಯಾಗಿತ್ತು.
ವಾರದ ಬಳಿಕ ಕಾರ್ಕಳ ಕುಕ್ಕುಂದೂರು ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಸ್ಥಳೀಯ ಯುವಕರು ಹಿಡಿದು ಈತನೇ ಕೊಲೆ ಆರೋಪಿ ಎಂದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣದ ಹಿಂದೆ ಹಲವರು ಪ್ರಬಲರಿದ್ದಾರೆ ಎಂಬ ಆರೋಪ ಮನೆಯವರಿಂದ ಕೇಳಿ ಬಂದ ಹಿನ್ನಲೆಯಲ್ಲಿ ತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ಭಾರೀ ಹೋರಾಟಗಳು ನಡೆದಿದ್ದವು.
ಅಂದಿನ ಶಾಸಕ ವಸಂತ ಬಂಗೇರ ಅವರ ಒತ್ತಾಯದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು.
"ನಮಗೆ ಮೊದಲ ಹಂತದ ನ್ಯಾಯ ಸಿಕ್ಕಿದಂತಾಗಿದೆ. ಸಂತೋಷ್ ರಾವ್ ಆರೋಪಿಯಲ್ಲ ಎಂದು ಅಂದಿನಿಂದಲೇ ಹೇಳುತ್ತಾ ಬಂದಿದ್ದೇವೆ. ಇದೀಗ ನ್ಯಾಯಾಲಯವೂ ಅದನ್ನೇ ಹೇಳಿದೆ. ಸಂತೋಷ್ ಅಲ್ಲದಿದ್ದರೆ ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಯಾರು ಎಂದಾಗಬೇಕಾಗಿದೆ. ಕೊಲೆಗಾರರು ಯಾರು ಎಂದು ಮತ್ತೆ ತನಿಖೆ ನಡೆಸಬೇಕಾಗಿದೆ. ನಾವು ಹಲವು ವಿಚಾರಗಳನ್ನು ಸಿಬಿಐ ಮುಂದೆ, ನ್ಯಾಯಾಲಯದ ಮುಂದೆ ಹೇಳಿದ್ದೆವು ಅದರ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಯಬೇಕಾಗಿದೆ".
-ವಿಠಲ ಗೌಡ ಸೌಜನ್ಯಳ ಮಾವ, ಸೌಜನ್ಯ ಪರವಾಗಿ ಹೋರಾಟದ ನೇತೃತ್ವ ವಹಿಸಿದ್ದವರು.