×
Ad

ಸರಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಲು ಸ್ಪೀಕರ್ ಯು.ಟಿ.ಖಾದರ್‌ ಮನವಿ

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಸನ್ಮಾನ

Update: 2023-06-19 18:47 IST

ಮಂಗಳೂರು: ಸರಕಾರಿ ಶಾಲೆಗಳ ಸ್ಥಿತಿ ಬಹಳ ಶೋಚನೀಯ ಸ್ಥಿತಿಯಲ್ಲಿದ್ದು, ಇವುಗಳ ಅಭಿವೃದ್ಧಿಗೆ ನೆರವಾಗುವಂತೆ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಕರೆ ನೀಡಿದ್ದಾರೆ.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಇಲ್ಲಿನ ಓಷಿಯನ್ ಪರ್ಲ್‌ನಲ್ಲಿ  ಸೋಮವಾರ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಯು.ಟಿ.ಖಾದರ್ ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ಮುಸ್ಲಿಂ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರಿ ಇದರ ಪದಾಧಿಕಾರಿಗಳು ಪ್ರತಿಯೊಂದು ಸರಕಾರಿ ಶಾಲೆಯ ಅಭಿವೃದ್ಧಿಯ  ಬಗ್ಗೆ ಕಾಳಜಿ ವಹಿಸಿದರೆ, ಶಾಲೆ ಅಭಿವೃದ್ಧಿಯಾಗುತ್ತದೆ. ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಸಮುದಾಯದ ಬೆಳವಣಿಗೆಗೆ ಪರೋಕ್ಷವಾಗಿ ನೆರವು ನೀಡಿದಂತಾಗುತ್ತದೆ ಎಂದರು.

ನಿಮ್ಮ್ಮೆಲ್ಲೆರ ಸಹಾಯ, ಸಹಕಾರ ಪಡೆದುಕೊಂಡು ಸಭಾಧ್ಯಕ್ಷ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವೆನು. ಸಮಾಜ, ಸಮುದಾಯ, ಜಿಲ್ಲೆಗೆ ಗೌರವ ತರುವ ನಿಟ್ಟಿನಲ್ಲಿ ಶ್ರಮಿಸುವೆನು ಎಂದರು.

ತಾನು ಯಾವತ್ತೂ ಅಧಿಕಾರಕ್ಕೆ ಆಸೆಪಟ್ಟವನಲ್ಲ. ಯಾವುದೇ ಪ್ರಭಾವ ಇಲ್ಲದೆ  ರಾಜಕೀಯ ಜೀವನದಲ್ಲಿ ಕಠಿಣ ಶ್ರಮದ ಮೂಲಕ ಯಶಸ್ಸು ಸಾಧಿಸಿರುವೆನು. ಯಾವುದೇ ಅಪೇಕ್ಷೆ ಪಡೆಯದೆ ಕರ್ತವ್ಯ ನಿರ್ವಹಿಸಿದರೆ ಅಧಿಕಾರ ಕಾಲ ಬುಡಕ್ಕೆ ಬರುತ್ತದೆ ಎಂದು ಹೇಳಿದರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಮ್ತಿಯಾಝ್, ಕೋಶಾಧಿಕಾರಿ ಮನ್ಸೂರ್ ಅಹ್ಮದ್‌, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು. ಬಿ.ಎಂ ಮುಮ್ತಾಝ್ ಅಲಿ ವಂದಿಸಿದರು. ಸಾಹಿಲ್ ಝಹೀರ್  ಕಾರ್ಯಕ್ರಮ ನಿರೂಪಿಸಿದರು.

Similar News