×
Ad

ಆಸ್ಪತ್ರೆಯಲ್ಲಿ ರೋಗಿಗಳು ಕಡಿಮೆಯಾಗಿಲಿ, ಸೇವೆ ಉತ್ತಮವಾಗಲಿ: ಶಾಸಕ ಅಶೋಕ್ ಕುಮಾರ್ ರೈ

ರೋಟರಿ ಕ್ಲಬ್ ಪುತ್ತೂರು ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ

Update: 2023-06-21 18:17 IST

ಪುತ್ತೂರು: ರೋಟರಿ ಸಂಸ್ಥೆಯು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ನೀಡಿರುವ ಸಂಸ್ಥೆಯು ಇದೀಗ ರೂ. 2 ಕೋಟಿಯ ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸುವ ಮೂಲಕ ಜನರ ಬಹು ಬೇಡಿಕೆಯನ್ನು ಈಡೇರಿಕೆ ಮಾಡಿದೆ. ಮುಂದೆ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದ್ದು, ಆ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಬೆಂಬಲ ಇನ್ನಷ್ಟು ಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಬುಧವಾರ ರೋಟರಿ ಚಾರಿಟೇಬಲ್ ಟ್ರಸ್ಟ್‍ನ ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಕೆಳ ಅಂತಸ್ತಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ರೋಟರಿ ಕ್ಲಬ್ ಪುತ್ತೂರು ಸ್ಪಶಾಲಿಟಿ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡುತ್ತಾ ನೂತನ ಆಸ್ಪತ್ರೆಯಲ್ಲಿ ರೋಗಿಗಳು ಕಡಿಮೆಯಾಗಲಿ ಹಾಗೂ ಉತ್ತಮ ಸೇವೆ ಲಭ್ಯವಾಗಲಿ ಎಂದರು.

ಪುತ್ತೂರಿನಲ್ಲಿ ರೋಟರಿ ಸಂಸ್ಥೆಯು ಬ್ಲಡ್ ಬ್ಯಾಂಕ್‍ನ ಸ್ಥಾಪಿಸುವ ಮೂಲಕ ಉತ್ತಮ ಕೊಡುಗೆಯನ್ನು ನೀಡಿದೆ. ಅಲ್ಲದೆ ಆರೋಗ್ಯ ನಿರ್ಮಾಣಕ್ಕಾಗಿ ಸಾಕಷ್ಟು ಕೊಡುಗೆಯನ್ನು ನೀಡುತ್ತಲೇ ಬಂದಿದೆ. ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ರೂ. 70 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಿದೆ. ಬಡ ಜನರ ಆರೋಗ್ಯ ಸೇವೆಗಾಗಿ ಈ ಸಂಸ್ಥೆಯಿಂದ ಇನ್ನಷ್ಟು ಸೇವೆಗಳು ಬೇಕಾಗಿದ್ದು, ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು 300 ಬೆಡ್ ಆಸ್ಪತ್ರೆಗೆ ಸಂಸ್ಥೆಯು ಬೆಂಬಲ ನೀಡಬೇಕು ಎಂದು ಹೇಳಿದರು. 

ರೋಟರಿ ಅಂತರಾಷ್ಟ್ರೀಯ ನಿರ್ದೇಶಕ ಮಹೇಶ್ ಅವರು ರೋಟರಿ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು. ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮೊಡಿಲರ್ ಒಟಿಯನ್ನು ಉದ್ಘಾಟಿಸಿದರು. ಅಂತರಾಷ್ಟ್ರೀಯ ರೋಟರಿಯ ಚಯರ್‌ಮ್ಯಾನ್ ರವಿವಡ್ಲಮನಿ ಡೇ ಕೇರ್ ಸೆಂಟರ್ ಉದ್ಘಾಟಿಸಿದರು. 

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ರೋಟರಿ ಪೌಂಡೇಶನ್‍ನ ಚಯರ್‌ಮ್ಯಾನ್ ಡಾ.ಕೆ ಸೂರ್ಯನಾರಾಯಣ, ಪ್ರಸಾದ್ ನೇತ್ರಾಲಯದ ಡಾ. ಕೃಷ್ಣ ಪ್ರಸಾದ್ ಕೆ ಮತ್ತು ಡಾ. ವಿಕ್ರಂ ಜೈನ್, ರೋಟರಿ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಎ.ಜಗಜೀವನ್‍ದಾಸ್ ರೈ, ಶ್ರೀಕಾಂತ ಕೊಳತ್ತಾಯ, ಜಯರಾಜ್ ಭಂಡಾರಿ, ಡಾ.ಶ್ರೀಪ್ರಕಾಶ್, ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಶ್ರೀಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. 

ಡಾ. ಭಾಸ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಉಮಾನಾಥ್ ಸ್ವಾಗತಿಸಿದರು. ಝೇವಿಯರ್ ಡಿಸೋಜ ನಿರೂಪಿಸಿದರು.

Similar News