ಬಾಗಲಕೋಟೆ: "ಬಾಗಲಕೋಟೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ಭೇಟಿ ಕೊಟ್ಟಿದ್ದೇನೆ, ಎಲ್ಲೂ ಯಾವುದೇ ಬೆಳೆ ಸರಿಯಾಗಿ ಬಂದಿಲ್ಲ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬಾಗಲಕೋಟೆ ಜಿಲ್ಲೆಯ ಶಿರೂರ್ ಗ್ರಾಮದಲ್ಲಿ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಬಳಿಕ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

"ಸೂರ್ಯಕಾಂತಿ ಇಲ್ಲ, ಮೆಣಸು ಇಲ್ಲ, ಹುರುಳಿ ಇಲ್ಲ, ತೊಗರಿ ಇಲ್ಲ. ಕೆಲವರು 20-30 ಎಕರೆ ಬಿತ್ತಿದ್ದಾರೆ, ವಿಮೆ ಮಾಡಿಸಿದ್ದೇವೆ ಎನ್ನುತ್ತಿದ್ದಾರೆ. ನಾನು ಅಧಿಕಾರಿಗಳು, ಶಾಸಕರ ಜೊತೆ ಚರ್ಚಿಸಿ ಪರಿಹಾರ ಏನು ಮಾಡಬಹುದು ಎಂದು ನೋಡುತ್ತೇನೆ. ಕೆಲವು ಕಡೆ ಬರ ಘೋಷಣೆ ಆಗಿದೆ, ಇನ್ನ ಕೆಲವು ಕಡೆ ಬರ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ" ಎಂದರು.

"ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ, ಉಳುಮೆ, ಟ್ರಾಕ್ಟರ್ ಖರ್ಚು ಎಷ್ಟು ಬೀಳುತ್ತಿದೆ ಎಂದು ನಾನೇ ಖುದ್ದಾಗಿ ಅಧ್ಯಯನ ಮಾಡಿದ್ದೇನೆ. ಮುಂದೆ ಏನು ಸಹಾಯ ಮಾಡಬಹುದು ಎಂದು ಯೋಚಿಸುತ್ತಿದ್ದೇನೆ. ನೋಡಕ್ಕೆ ಹಸಿ ಇರುತ್ತೆ, ಆದರೆ ಬೆಳೆ ಇರಲ್ಲ. ಸೂರ್ಯಕಾಂತಿ ಒಣಗಿದೆ, ಮೆಣಸಿನಕಾಯಿಗೆ ರೋಗ ಬಂದಿದೆ. ಹಸಿರು ಇದ್ದ ಮಾತ್ರಕ್ಕೆ ಬೆಳೆ ಕೈಗೆ ಬಂದಂತೆ ಅಲ್ಲ" ಎಂದು ಹೇಳಿದರು.

ರೈತರಿಗೆ ನೆರವು ನೀಡುವುದು ಕೇಂದ್ರದ ಜವಾಬ್ದಾರಿ

"ಕೇಂದ್ರ ಸರ್ಕಾರದವರು ರೈತರ ಸಹಾಯಕ್ಕೆ ಬರಬೇಕು. ಇದು ಬಿಜೆಪಿಯವರ ಜವಾಬ್ದಾರಿ. ಅವರ ಶಾಸಕರು ಕೇಂದ್ರ ಸರ್ಕಾರ, ಪ್ರಧಾನಿ ಮೇಲೆ ಒತ್ತಾಯ ಮಾಡಿ ಸಾಲಮನ್ನಾ ಮಾಡಿಸಬೇಕು. ಹಿಂದೆ ನಮ್ಮ ಸರ್ಕಾರ ಮನಮೋಹನ್ ಸಿಂಗ್ ಅವರು ಮಾಡಿದರು, ಇವರು ಕೂಡ ಮಾಡಬೇಕು. ಬ್ಯಾಂಕ್ ಗಳು ಅವರ ಹಿಡಿತದಲ್ಲಿದೆ" ಎಂದರು.

"ಹಿಂದಿನ ವಿಮೆ ಇನ್ನೂ ಬಂದಿಲ್ಲ, ಅದಕ್ಕೇ ಮೀಟಿಂಗ್ ಮಾಡುತ್ತಿದ್ದೇನೆ. ಅರ್ಧ ನೀರಾವರಿ, ಅರ್ಧ ಖುಷ್ಕಿ ಎಂದು ಲೆಕ್ಕ ಹಾಕುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ವರದಿ ಕಳಿಸಿದ್ದೇನೆ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಎರಡನೇ ಪಟ್ಟಿ ಪರಿಶೀಲಿಸುತ್ತಿದ್ದಾರೆ, ಆದಷ್ಟು ಬೇಗ ಘೋಷಣೆ ಮಾಡುತ್ತೇವೆ" ಎಂದರು.

ಫಸಲ್ ಬಿಮಾ ಯೋಜನೆಯಲ್ಲಿ 30 ಕೋಟಿ ರೂ. ಹಗರಣ

ಫಸಲ್ ಬಿಮಾ ಯೋಜನೆಯಲ್ಲಿ ಬಾಗಲಕೋಟೆಯಲ್ಲಿ 30 ಕೋಟಿ ಹಗರಣ ಆಗಿದೆ, ಅಧಿಕಾರಿಗಳೇ ದೂರು ಕೊಟ್ಟು ಎಫ್ಐಆರ್ ಆಗಿದೆ, ಆದರೆ ಕ್ರಮ ಇಲ್ಲ, ಏಜೆಂಟ್ಗಳ ಜಾಲ ಇದೆ ಎಂದು ಮಾಧ್ಯಮಗಳು ಗಮನ ಸೆಳೆದಾಗ, "ಇದು ರಾಜ್ಯ ಮಟ್ಟದ ಜಾಲ, ವಿಮೆಯಲ್ಲಿ ದೊಡ್ಡ ಜಾಲ ಇದೆ. ವರದಿ ತರಿಸಿ ಬೆಂಗಳೂರಲ್ಲಿ ಮೀಟಿಂಗ್ ಮಾಡುತ್ತೇನೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor