ಬಾಗಲಕೋಟೆ: ನಗರದ ನವನಗರದ ಸೆಕ್ಟರ್ ನಂ. 26ರಲ್ಲಿರುವ ಓಂ ಜ್ಯುವೆಲರ್ಸ್ ಅಂಗಡಿಗೆ ನುಗ್ಗಿದ ಮೂವರು ಮುಸುಕುಧಾರಿ ದುಷ್ಕರ್ಮಿಗಳು, ಸುಮಾರು 2 ಕೋಟಿ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಶುಕ್ರವಾರ ನಸುಕಿನ ಜಾವ 2ರಿಂದ 4 ಗಂಟೆಯ ಅವಧಿಯಲ್ಲಿ ಗ್ಯಾಸ್ ಕಟರ್ ಬಳಸಿ ಅಂಗಡಿಯ ಬೀಗವನ್ನು ಕತ್ತರಿಸಿದ ದುಷ್ಕರ್ಮಿಗಳು ಒಳನುಗ್ಗಿದ್ದಾರೆ. ದಿಗಂಬರ ಕುರಡೇಕರ ಅವರಿಗೆ ಸೇರಿದ ಆಭರಣ ಅಂಗಡಿಯಲ್ಲಿ ಸುಮಾರು 100 ಕೆ.ಜಿ. ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳವಾಗಿರುವ ಆಭರಣಗಳ ಅಂದಾಜು ಮೌಲ್ಯ 2 ಕೋಟಿ ರೂ. ಎಂದು ತಿಳಿದುಬಂದಿದೆ.

ಕಳ್ಳತನದ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೆಂಪು ಬಣ್ಣದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಂಗಡಿಯೊಳಗೆ ನುಗ್ಗಿ, ಬೆಳ್ಳಿ ಆಭರಣಗಳನ್ನು ಚೀಲಗಳಲ್ಲಿ ತುಂಬಿಕೊಂಡು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಕಳ್ಳರ ಮುಖವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿಯೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಎಎಸ್ಪಿ ಜಗದೀಶ್ ಹಾಗೂ ಡಿವೈಎಸ್ಪಿ ಗಜಾನನ ಸುತಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಕಳವಾಗಿರುವ ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳ ನಿಖರ ಪ್ರಮಾಣ ಹಾಗೂ ಮೌಲ್ಯವನ್ನು ಪರಿಶೀಲನೆಯ ಬಳಿಕ ಅಧಿಕೃತವಾಗಿ ತಿಳಿಯಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor