ಬಾಗಲಕೋಟೆ: ಜಿಲ್ಲೆಯ ಕಬ್ಬು ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲಕರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ನಡೆಸಿದ ಸತತ 8 ಗಂಟೆಗಳ ಜಂಟಿ ಸಭೆಯಲ್ಲಿ ಪ್ರಸಕ್ತ ಹಂಗಾಮಿಗೆ ಕಬ್ಬಿಗೆ ಪ್ರತಿ ಟನ್ ಗೆ 3,600 ರೂ.ಗಳ ದರ ನಿಗದಿಪಡಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿಯ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಕಬ್ಬು ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸಕ್ಕರೆ ಕಾರ್ಖಾನೆ ಮಾಲಕರ ಅಹವಾಲುಗಳನ್ನು ಸಚಿವರು ಸುದೀರ್ಘವಾಗಿ ಆಲಿಸಿದರು. ರೈತರು ಹಾಗೂ ಕಾರ್ಖಾನೆಗಳ ನಡುವೆ ಉಂಟಾಗಿದ್ದ ದರದ ವಿಚಾರ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಚರ್ಚೆಯ ಬಳಿಕ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿರುವ ದರಕ್ಕೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರು ಬದ್ದರಾಗಿ ಕಾರ್ಖಾನೆ ಪ್ರಾರಂಭಿಸಲು ಮನವಿ ಮಾಡಿಕೊಂಡರು.

ನಿಗದಿತಪಡಿಸಿದ ದರದಂತೆ ಕಬ್ಬು ಖರೀದಿ ಹಾಗೂ ಪಾವತಿ ಮಾಡುವುದಾಗಿ ಕಾರ್ಖಾನೆಗಳು ಲಿಖಿತ ರೂಪದಲ್ಲಿ ಜಿಲ್ಲಾಡಳಿತಕ್ಕೆ ಪತ್ರ ನೀಡಬೇಕು. ಬಳಿಕ ಯಾವುದೇ ವಿಳಂಬ ಮಾಡದೇ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಹೊಸ ಹಂಗಾಮು ಆರಂಭವಾಗುವ ಮೊದಲು ಪ್ರಸಕ್ತ ದರಕ್ಕಿಂತ ಹೆಚ್ಚಾದಲ್ಲಿ ಆದಾಯದ ಆಧಾರದ ಮೇಲೆ ಶೇ.75ರಷ್ಟು ರೈತರಿಗೆ ಹಾಗೂ ಶೇ.25ರಷ್ಟು ಕಾರ್ಖಾನೆಗಳಿಗೆ ಲಾಭಾಂಶ ವಿತರಣೆಯಾಗಬೇಕೆಂದು ಕಾರ್ಖಾನೆಗಳಿಗೆ ಸಚಿವರು ಸೂಚಿಸಿದರು.

ಬರಗಾಲ ಮತ್ತು ನೀರಿನ ಕೊರೆತೆಯಿಂದ ಕಬ್ಬಿನ ಇಳುವಳಿ ಹಾಗೂ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ರೈತರಿಗೆ ಹೆಚ್ಚಿನ ನಷ್ಟವಾಗದಂತೆ ನಿಗದಿತ ಸಮಯದಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸುವುದು ಅಗತ್ಯವಾಗಿದೆ ಎಂದರು.

ಪ್ರಸಕ್ತ ಕಬ್ಬು ಹಂಗಾಮು ಪ್ರಾರಂಭವಾಗುವ ಮುನ್ನವೇ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ. ರೈತರಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು ಕೊಡುವ, ನಿಟ್ಟಿನಲ್ಲೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರಕಾರ ರೈತರ ಹಿತಾಸಕ್ತಿಯನ್ನು ಕಾಪಾಡಲು ಬದ್ಧವಾಗಿದೆ. ರೈತರು ಹಾಗೂ ಕಾರ್ಖಾನೆ ಮಾಲಕರ ನಡುವೆ ಸಮನ್ವಯ ಸಾಧಿಸುವ ಮೂಲಕ ಕಬ್ಬು ಹಂಗಾಮು ಸುಗಮವಾಗಿ ನಡೆಯುವಂತೆ ಎಲ್ಲರೂ ಸಹಕರಿಸಬೇಕು. ನಿಗದಿಪಡಿಸಿದ ದರಕ್ಕೆ ಎರಡು ಕಡೆಯವರು ಬದ್ದರಾಗಿ, ಕಾರ್ಖಾನೆಗಳನ್ನು ಶೀಘ್ರವಾಗಿ ಆರಂಭಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ., ಉಪ ವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಇತರ ಅಧಿಕಾರಿಗಳು ರೈತ ಮುಖಂಡರು ಸಕ್ಕರೆ ಕಾರ್ಖಾನೆ ಮಾಲಕರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor