ಸಚಿವ ಸಂಪುಟಕ್ಕೆ ವಿಜಯಾನಂದ ಕಾಶಪ್ಪನವರ್ ಸೇರ್ಪಡೆ: ಹುನಗುಂದ ಶಾಸಕನಿಗೆ ಸಚಿವ ಗಿರಿ
ಬಾಗಲಕೋಟೆ : ಲಿಂಗಾಯತ ಪಂಚಮಸಾಲಿ ಸಮುದಾಯದ ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎರಡನೇ ಬಾರಿಗೆ ಶಾಸಕರಾಗಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಹುನಗುಂದ ಕ್ಷೇತ್ರದಿಂದ ಸ್ಪರ್ಧಿಸುವ ವಿಜಯಾನಂದ ಕಾಶಪ್ಪನವರ ಸೋಲುತ್ತಾರೆ. 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಪುನಃ 2018ರ ಚುನಾವಣೆಯಲ್ಲಿ ಸೋಲುವ ಅವರು, 2023ರ ಚುನಾವಣೆಯಲ್ಲಿ 30 ಸಾವಿರ ಮತಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದು, ಇದೀಗ ಸಚಿವರಾಗಿದ್ದಾರೆ.
ವಿಜಯಾನಂದ ಕಾಶಪ್ಪನವರ ತಂದೆ ಎಸ್.ಆರ್. ಕಾಶಪ್ಪನವರ 1985ರಲ್ಲಿ ಕಾಂಗ್ರೆಸ್‍ನಿಂದ ಮೊದಲ ಬಾರಿಗೆ ಹುನುಗುಂದ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಅನಂತರ 1989, 94, 99ರಲ್ಲಿ ಗೆಲ್ಲುವ ಮೂಲಕ ವಿಜಯ ದಾಖಲಿಸುತ್ತಾರೆ. ಅಲ್ಲದೆ, ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರೂ ಆಗಿ ಕಾರ್ಯ ನಿರ್ವಹಿಸಿದ್ದರು.
2003ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಸಮೀಪದ ರಸ್ತೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಸ್.ಆರ್. ಕಾಶಪ್ಪನವರ ನಿಧನರಾಗುತ್ತಾರೆ. ಉಪ ಚುನಾವಣೆಯಲ್ಲಿ ಕಾಶಪ್ಪನವರ್ ಪತ್ನಿ ಗೌರಮ್ಮ ಕಾಶಪ್ಪನವರಿಗೆ ಟಿಕೆಟ್ ನೀಡಲಾಗುತ್ತದೆ. ಅವರು ಗೆಲುವು ಸಾಧಿಸಿ, ಮೊದಲ ಬಾರಿಗೆ ವಿಧಾನಸೌಧದ ಪ್ರವೇಶಿಸುತ್ತಾರೆ. 2004ರ ಚುನಾವಣೆ ಸೋಲನ್ನು ಕಂಡಿದ್ದರು.
2008ರಲ್ಲಿ ಆ ಕ್ಷೇತ್ರವನ್ನು ಗೌರಮ್ಮ ಅವರು ಪುತ್ರ ವಿಜಯಾನಂದ ಕಾಶಪ್ಪನವರಿಗೆ ಬಿಟ್ಟು ಕೊಡುತ್ತಾರೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಲ್ಲಿಯೂ ಗುರುತಿಸಿಕೊಂಡಿದ್ದ ವಿಜಯಾನಂದ ಕಾಶಪ್ಪನವರ್ ಇದೇ ಮೊದಲ ಬಾರಿಗೆ ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ.