×
Ad

ಕಬ್ಬಿಗೆ ಬೆಲೆ ನಿಗದಿ ವಿಚಾರ : ಮುಧೋಳ, ಜಮಖಂಡಿ ರಸ್ತೆ ಬಂದ್ ಮಾಡಿ ರೈತರಿಂದ ಪ್ರತಿಭಟನೆ

Update: 2025-11-12 13:30 IST

ಬಾಗಲಕೋಟೆ : ಮುಧೋಳ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಹೋರಾಟ ಇಂದು ತೀವ್ರ ಸ್ವರೂಪ ಪಡೆದಿದ್ದು, ನಿನ್ನೆ (ಮಂಗಳವಾರ) ಸಂಜೆಯಿಂದ ರಾತ್ರಿ 11 ಗಂಟೆಯವರೆಗೆ ರೈತರು ಮತ್ತು ಕಾರ್ಖಾನೆ ಮಾಲಕರ ನಡುವೆ ನಡೆದ ಸಭೆಯೂ ಫಲಕಾರಿಯಾಗದ ಹಿನ್ನಲೆಯಲ್ಲಿ, ರೈತರು ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಜಿಲ್ಲಾಧಿಕಾರಿ ಸಂಗಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರು ಪ್ರತಿ ಟನ್‌ಗೆ 3,500 ರೂ. ದರ ನೀಡುವಂತೆ ಒತ್ತಾಯಿಸಿದ್ದರು. ಆದರೆ ಕಾರ್ಖಾನೆ ಮಾಲಕರು ಎಫ್‌ಆರ್‌ಪಿ ಪರಿಗಣನೆ ಇಲ್ಲದೆ 3,300 ರೂ. ನೀಡುವುದಾಗಿ ಹೇಳಿದರೂ, ಎಲ್ಲ ಮಾಲಕರಿಂದ ಸ್ಪಷ್ಟ ಉತ್ತರ ದೊರಕದ ಕಾರಣ ಸಭೆ ವಿಫಲವಾಯಿತು.

ಸಭೆ ವಿಫಲವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ರೈತರು ವಿವಿಧ ಕಡೆಗಳಲ್ಲಿ ರಸ್ತೆ ತಡೆ ನಡೆಸಿದ್ದಾರೆ. ಶಿರೋಳ, ಮಂಟೂರು, ಯಡಹಳ್ಳಿ ಸೇರಿದಂತೆ ಹಲವೆಡೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಶಿರೋಳದ ಬಳಿ ಮುಳ್ಳಿನ ಕಂಟಿ, ಕಲ್ಲು ಹಾಕಿ ರಸ್ತೆ ಬಂದ್ ಮಾಡಿರುವ ರೈತರು ಮೇವಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ.

ಮುಧೋಳ–ಜಮಖಂಡಿ ಮಾರ್ಗ ಸೇರಿದಂತೆ ಬುದ್ನಿ ಪಿಎಂ ರಸ್ತೆಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮುಧೋಳ ಪಟ್ಟಣದ ಬಹುತೇಕ ಭಾಗ ಬಂದ್ ಆಗಿದ್ದು, ಪ್ರತಿಭಟನಾಕಾರರು “ಟನ್‌ಗೆ 3,500 ರೂ. ದರ ನೀಡಿ” ಎಂದು ಘೋಷಣೆ ಕೂಗುತ್ತಿದ್ದಾರೆ.

ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದ ಹಿನ್ನಲೆಯಲ್ಲಿ ಮುಧೋಳ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೋರಾಟ ತೀವ್ರಗೊಳ್ಳುತ್ತಿದೆ. ಸರಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರೆಗೆ ಒತ್ತಡ ತಂದು ಪ್ರತಿ ಟನ್ ಗೆ 3,500 ರೂ. ದರ ನಿಗದಿಗೊಳಿಸುವವರೆಗೆ ಹೋರಾಟ ಕೈ ಬಿಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News