Ballari | ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಲು ವೇಷಭೂಷಣ ಸ್ಪರ್ಧೆಗಳು ಸಹಕಾರಿ: ಹೊಸಕೋಟೆ ಜಗದೀಶ
ಬಳ್ಳಾರಿ/ಕಂಪ್ಲಿ: ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಂಪ್ಲಿ, ಅಕ್ಕ ಮಹಾದೇವಿ ಮಹಿಳಾ ಮಂಡಳಿ ಹಾಗೂ ಅಕ್ಷತಾ ಫ್ಲವರ್ ಸ್ಟಾಲ್ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬುಧವಾರ ಮಕ್ಕಳಿಗೆ ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮನಸ್ಸು ಹೂವಿನಂತೆ ನಿರ್ಮಲವಾಗಿರುತ್ತದೆ. ಚಿಕ್ಕ ಮಕ್ಕಳಿಗೆ ಯಾವುದೇ ವೇಷಭೂಷಣ ತೊಡಿಸಿದರೂ ಅಂದವಾಗಿ ಕಾಣುತ್ತಾರೆ. ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳ ಪರಿಚಯ ಮಾಡಿಸುವ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಲು ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಸಬೇಕು ಎಂದರು.
ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಪಾಲಕರು ಮಕ್ಕಳಿಗೆ ಉತ್ತಮ ದಾರಿ ತೋರಿಸಬೇಕು. ಪರಸ್ಪರ ವಿಶ್ವಾಸ ಹಾಗೂ ಪ್ರೀತಿಯಿಂದ ಇರುವಂತೆ ಬೆಳೆಸಬೇಕು. ಚಿಕ್ಕ ಮಕ್ಕಳಿಗೆ ಮೊಬೈಲ್ ನೀಡುವ ಅಭ್ಯಾಸ ಬೆಳೆಸಬಾರದು. ಮೊಬೈಲ್ ಗೀಳು ಹೆಚ್ಚಾದರೆ ಶಿಕ್ಷಣದ ಕಡೆಗೆ ಮಕ್ಕಳ ಒಲವು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ಕಲಿಸಿದಾಗ ಮಾತ್ರ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು.
ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ಸಹಸ್ರ ಲಕ್ಷ್ಮಿ ಪ್ರಥಮ, ನಂದನ್ ದ್ವಿತೀಯ, ಗಿಪ್ಲಾ ತೃತೀಯ ಹಾಗೂ ಇಷಾ ನಾಲ್ಕನೇ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಘನಮಠ ಸ್ವಾಮಿ, ಜನಜಾಗೃತಿ ಉಪಾಧ್ಯಕ್ಷೆ ಮಹೇಶ್ವರಿ, ಅಕ್ಕ ಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ. ಶಾರದಾ ಹಿರೇಮಠ, ಸಹಕಾರ್ಯದರ್ಶಿ ಬಿ.ಎಂ. ಪುಷ್ಪಾ, ಒಕ್ಕೂಟದ ಅಧ್ಯಕ್ಷೆ ನಿರ್ಮಲಾ, ನಿರ್ಣಾಯಕರಾದ ಬನಶಂಕರಿ ಹಾಗೂ ಶಿಲ್ಪ ದರೋಜಿ, ಸಮನ್ವಯಾಧಿಕಾರಿ ಮಂಜುಳಾ, ಮೇಲ್ವಿಚಾರಕಿ ಮಂಜುಳಾ, ಕೃಷಿ ಅಧಿಕಾರಿ ಸಂಜೀವಕುಮಾರ ಸೇರಿದಂತೆ ಸೇವಾ ಪ್ರತಿನಿಧಿಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.