ಸಿರುಗುಪ್ಪ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ತುಂಗಭದ್ರಾ ನದಿಗೆ ಸಮರ್ಪಕವಾಗಿ ನೀರು ಹರಿಸಬೇಕು ಹಾಗೂ ರೈತರು ಪಾವತಿಸಿರುವ ಬೆಳೆ ವಿಮೆ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಅನಿರ್ದಿಷ್ಟ ಧರಣಿ ನಡೆಸಲಾಯಿತು.

ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿ, ತಾಲೂಕಿನಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬಿತ್ತನೆ ಅವಧಿ ಮೀರಿದರೂ ಕೃಷಿಗೆ ಪೂರಕವಾದ ಮಳೆಯಾಗಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಕೃಷಿ ಕಾರ್ಮಿಕರಿಗೂ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ತುಂಗಭದ್ರಾ ಜಲಾಶಯದಿಂದ ನದಿಗೆ ಸಮರ್ಪಕವಾಗಿ ನೀರು ಹರಿಸುವುದರ ಜತೆಗೆ, ಎಲ್‌ಎಲ್‌ಸಿ ಕಾಲುವೆ ಮೂಲಕ ವೇದಾವತಿ (ಹಗರಿ) ನದಿಗೂ ನೀರು ಹರಿಸಬೇಕು. ರೈತರಿಗೆ ಪಾವತಿಸಬೇಕಿರುವ ಬೆಳೆ ವಿಮೆ ಮೊತ್ತವನ್ನು ಶೀಘ್ರ ಬಿಡುಗಡೆಗೊಳಿಸಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಗಂಗಪ್ಪ, ನೇಣಿಕಪ್ಪ, ಕೃಷ್ಣಪ್ಪ, ಲಕ್ಷ್ಮಣ, ಮೇಕೆಲಿ ವೀರೇಶ್, ನಟರಾಜ, ಮಹಾದೇವ, ಜಿನ್ ಬಸವರಾಜ, ಬೆಳಗಲ್ ಶಿವಪ್ಪ, ನಾಗರಾಜ, ಶಿನಪ್ಪ, ಎಸ್. ಖಾಸಿಂ, ಇಸ್ಮಾಯಿಲ್, ವಲಿಪೀರ್, ಹುಸೇನಿ, ಖಾಜಾಸಾಬ್, ಮಹಮ್ಮದ್ ಅಲಿ, ಬಂದೇನವಾಜ್ ಸೇರಿದಂತೆ ರೈತರು ಹಾಗೂ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor