Ballari | ಗ್ರಾಮೀಣರ ಮನೆ ಬಾಗಿಲಿಗೆ ಆರೋಗ್ಯ ಸೇವೆ; ಸಂಡೂರಿನಲ್ಲಿ 3 ಮೊಬೈಲ್ ಹೆಲ್ತ್ ಯೂನಿಟ್‌ಗಳಿಗೆ ಚಾಲನೆ
ಸಂಡೂರು/ಬಳ್ಳಾರಿ: ಆರೋಗ್ಯ ಸೇವೆಗಾಗಿ ಗ್ರಾಮೀಣ ಜನರು ದೂರದ ಆಸ್ಪತ್ರೆಗಳಿಗೆ ಅಲೆದಾಡುವುದನ್ನು ತಪ್ಪಿಸಿ, ವೈದ್ಯಕೀಯ ಸೇವೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದ ಮಹತ್ವದ ಜನಪರ ಯೋಜನೆಗೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಚಾಲನೆ ದೊರೆಯಿತು.
ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಜನರಿಗೆ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ JSW ಸಂಸ್ಥೆಯ CSR ನಿಧಿಯ ಸಹಯೋಗದಲ್ಲಿ ಮೂರು ಮೊಬೈಲ್ ಹೆಲ್ತ್ ಯೂನಿಟ್‌ಗಳಿಗೆ ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಮ್ ಚಾಲನೆ ನೀಡಿದರು. ಇದೇ ವೇಳೆ ಕ್ಷೇತ್ರದ 90 ಗ್ರಾಮಗಳಿಗೆ ಭೇಟಿ ನೀಡುವ ವಾರ್ಷಿಕ ವೇಳಾಪಟ್ಟಿಯ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು.
ಮೊಬೈಲ್ ಆರೋಗ್ಯ ಘಟಕಗಳು ಸಂಡೂರು ವಿಧಾನಸಭಾ ಕ್ಷೇತ್ರದ 90 ಗ್ರಾಮಗಳಿಗೆ ನಿಗದಿತ ವೇಳಾಪಟ್ಟಿಯಂತೆ ಭೇಟಿ ನೀಡಿ, ಗ್ರಾಮಸ್ಥರಿರುವ ಸ್ಥಳದಲ್ಲಿಯೇ ಮೂಲಭೂತ ಆರೋಗ್ಯ ತಪಾಸಣೆ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲಿವೆ. ಪ್ರತಿ ಘಟಕದಲ್ಲಿ ಎಂಬಿಬಿಎಸ್ ವೈದ್ಯರು, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಸೋಷಿಯಲ್ ಮೊಬಿಲೈಸರ್ ಹಾಗೂ ಚಾಲಕ ಕಮ್ ಅಟೆಂಡರ್ ಒಳಗೊಂಡ ತಂಡ ಕಾರ್ಯನಿರ್ವಹಿಸಲಿದೆ.
ಗ್ರಾಮಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಜನರ ಆರೋಗ್ಯ ತಪಾಸಣೆ ನಡೆಸುವುದರ ಜತೆಗೆ ಅಗತ್ಯ ಪರೀಕ್ಷೆಗಳನ್ನು ಸ್ಥಳದಲ್ಲಿಯೇ ಕೈಗೊಳ್ಳಲಾಗುತ್ತದೆ. ವೈದ್ಯಕೀಯ ಸಲಹೆ, ಔಷಧೋಪಚಾರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತದೆ. ಇದರಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಗ್ರಾಮೀಣ ಜನರು ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಕಡಿಮೆಯಾಗಲಿದೆ.
ವಿಶೇಷವಾಗಿ ವಯೋವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ದೂರದ ಗ್ರಾಮಗಳಲ್ಲಿ ವಾಸಿಸುವವರಿಗೆ ಮೊಬೈಲ್ ಆರೋಗ್ಯ ಘಟಕಗಳು ಹೆಚ್ಚಿನ ಅನುಕೂಲ ಕಲ್ಪಿಸಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಅನ್ನಪೂರ್ಣ ತುಕಾರಾಮ್, “ಆರೋಗ್ಯ ಸೇವೆಗಾಗಿ ಜನರು ದೂರದ ಆಸ್ಪತ್ರೆಗೆ ತೆರಳುವ ಬದಲು, ಆರೋಗ್ಯ ಸೇವೆಯೇ ಜನರ ಮನೆ ಬಾಗಿಲಿಗೆ ತಲುಪಬೇಕು ಎಂಬ ಆಶಯದೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ” ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸಲಹೆ ದೊರೆತರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್ ಹೆಲ್ತ್ ಯೂನಿಟ್‌ಗಳು ಪ್ರಮುಖ ಪಾತ್ರ ವಹಿಸಲಿವೆ. ಕ್ಷೇತ್ರದ 90 ಗ್ರಾಮಗಳನ್ನು ಒಳಗೊಂಡ ವಾರ್ಷಿಕ ವೇಳಾಪಟ್ಟಿಯಂತೆ ಆರೋಗ್ಯ ತಂಡಗಳು ಗ್ರಾಮಗಳಿಗೆ ತೆರಳಿ ಸೇವೆ ನೀಡಲಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
JSW ಸಂಸ್ಥೆಯ CSR ಸಹಕಾರದಿಂದ ಆರಂಭಗೊಂಡಿರುವ ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಲಭ್ಯತೆ ಹೆಚ್ಚಿಸುವುದರ ಜತೆಗೆ, ತಡೆಗಟ್ಟುವ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ.