×
Ad

ಇನ್ನೂ 30 ಲೋಕಸಭಾ ಸ್ಥಾನಗಳು ಬಂದಿದ್ದರೆ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಿದ್ದರು: ಕೆ.ಎಚ್.ಮುನಿಯಪ್ಪ

Update: 2025-11-02 20:07 IST

ದೇವನಹಳ್ಳಿ : ಜಾತ್ಯತೀತ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಬೇಕೆಂಬುದು ರಾಷ್ಟ್ರದ ಜನರ ಅಭಿಪ್ರಾಯವಾಗಿದೆ. ಇನ್ನೊಂದು 30 ಲೋಕಸಭಾ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರೆ, ಇಂದು ರಾಹುಲ್ ಗಾಂಧಿ ಪ್ರಧಾನಿ ಆಗಿರುತ್ತಿದ್ದರು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ರವಿವಾರ ಮತ ಕಳ್ಳತನ ಪ್ರಕರಣ ಕುರಿತು ದೇವನಹಳ್ಳಿ ಮತ್ತು ವಿಜಯಪುರ ಬ್ಲಾಕ್ ಕಾಂಗ್ರೆಸ್ ನಾಯಕರೊಂದಿಗೆ ಭಕ್ತರಹಳ್ಳಿ ಕೃಷ್ಣಪ್ಪನವರ (ಬಿವಿಕೆ) ಗೀತಾ ಕನ್ವೆನ್ಷನ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದ ಸಭೆಯಲ್ಲಿ ಮಾತನಾಡಿದರು.

ದೇಶದ ಪ್ರಗತಿಗೆ ಜಾತ್ಯತೀತ ವ್ಯವಸ್ಥೆ ಅಗತ್ಯ. ಆದರೆ, ಕೆಲವರು ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕರು ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಸುಮಾರು 100 ಲೋಕಸಭಾ ಕ್ಷೇತ್ರಗಳಲ್ಲಿ ಮತ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ ಎಂದು ಮುನಿಯಪ್ಪ ಮಾಹಿತಿ ನೀಡಿದರು.

ಮತ ಕಳ್ಳತನವನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯ. ಬೂತ್ ಕಮಿಟಿ ಅಧ್ಯಕ್ಷರು ತಮ್ಮ ಜವಾಬ್ದಾರಿಯನ್ನು ನಿಷ್ಠೆ ಯಿಂದ ನಿರ್ವಹಿಸಿದರೆ ಪಕ್ಷದ ಶಕ್ತಿ ಹೆಚ್ಚುತ್ತದೆ. ದೇವನಹಳ್ಳಿ ತಾಲೂಕು ಇಂದು ಶೇಕಡಾವಾರು ಮತದಾನದ ಪ್ರಮಾಣದಲ್ಲಿ ನಂಬರ್ ಒನ್ ಆಗಿದೆ ಎಂದರು.

ಬೂತ್ ಕಮಿಟಿ ಅಧ್ಯಕ್ಷರು, ಪಿಎಲ್‍ಎಗಳು ಹಾಗೂ ಎಲ್ಲ ವರ್ಗದ ಕಾರ್ಯಕರ್ತರು ಪ್ರತಿ ಹೋಬಳಿಯಲ್ಲೂ ಸಂಘಟನೆ ಬಲಪಡಿಸುವ ಕಾರ್ಯ ಮುಂದುವರಿಸಬೇಕು. ಈ ಹೋರಾಟ ರಾಜ್ಯದ ಮಾದರಿಯಾಗಬೇಕು. ನಾನು 40 ವರ್ಷಗಳಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ. ಪಕ್ಷ ದೊಡ್ಡದು, ಪಕ್ಷ ಮೊದಲು, ನಂತರ ನಾವು ಎಂದು ಮುನಿಯಪ್ಪ ಕರೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾ ನ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ, ಬೆಂ.ಗ್ರಾ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ, ಬಯ್ಯಪ್ಪಾ ಅಧ್ಯಕ್ಷ ಶಾಂತಕುಮಾರ್, ಸದಸ್ಯರಾದ ಪ್ರಸನ್ನ ಕುಮಾರ್, ಮಂಜುನಾಥ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News