×
Ad

ಕ್ರಿಕೆಟ್ ಆಟದ ವಿಚಾರಕ್ಕೆ ಜಗಳ: ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ

Update: 2023-08-13 23:45 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ಕ್ರಿಕೆಟ್ ಆಟದ ಸೋಲು-ಗೆಲುವಿನ ವಿಚಾರವಾಗಿ ಆರಂಭವಾದ ಜಗಳದಲ್ಲಿ ಸ್ನೇಹಿತರೇ ಸಹೋದರರಿಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳ್ಳಂದೂರು ಸಮೀಪದ ಹರಳೂರು ರಸ್ತೆಯಲ್ಲಿ ನಡೆದಿರುವುದು ವರದಿಯಾಗಿದೆ.

ಆ.9ರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಜೀವನ್ ಜೋಯೆಲ್ ಮತ್ತು ಜೋಸೆಫ್ ಎಂಬ ಸಹೋದರರ ಮೇಲೆ ಹಲ್ಲೆ ಮಾಡಿದ ಆರೋಪದಡಿ ರಮೇಶ್, ಯಶ್ವಂತ್, ಪವನ್ ಎಂಬಾತನನ್ನು ಬಂಧಿಸಲಾಗಿದೆ.

ಕ್ರಿಕೆಟ್ ಆಡುವಾಗ ಸೋಲು ಗೆಲುವಿನ ವಿಚಾರದಲ್ಲಿ ಸ್ನೇಹಿತರ ನಡುವೆ ಜಗಳ ನಡೆದಿತ್ತು. ಪರಸ್ಪರ ಒಬ್ಬರ ಬಗ್ಗೆ ಮತ್ತೊಬ್ಬರು ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರು ಎಂಬ ಸಿಟ್ಟಿಗೆ ಆರೋಪಿಗಳು ಆ.9ರಂದು ಮಾತನಾಡಬೇಕು ಎಂದು ಕರೆಸಿಕೊಂಡಿದ್ದರು. ಅದರಂತೆ ಜೀವನ್ ಜೋಯೆಲ್ ಹಾಗೂ ಜೋಸೆಫ್ ಸಹೋದರರು ಹರಳೂರು ರಸ್ತೆಯಲ್ಲಿರುವ ಅಂಗಡಿಯೊಂದರ ಸಮೀಪ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಗಳು ಜೀವನ್ ಮತ್ತು ಜೋಸೆಫ್ ಮೇಲೆ ಆರೋಪಿಗಳು ಬಾಂಡಲಿ, ಸೌಟ್, ನೀರಿನ ಕ್ಯಾನ್ ಸೇರಿ ಅಡುಗೆ ಸಾಮಗ್ರಿಗಳಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ನಡು ರಸ್ತೆಯಲ್ಲಿ ಸಹೋದರರ ಮೇಲೆ ಹಲ್ಲೆ ಮಾಡುವ ದೃಶ್ಯಗಳು ಸಾರ್ವಜನಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದವು.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಠಾಣಾ ಪೊಲೀಸರು ಆರೋಪಿಗಳಾದ ರಮೇಶ್, ಯಶ್ವಂತ್, ಪವನ್ ರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಯಾರೂ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News