×
Ad

ಭೂಮಿ ತಂಟೆಗೆ ಬಂದರೆ ಯಾವ ಸರಕಾರವೂ ಉಳಿಯುವುದಿಲ್ಲ : ಬಡಗಲಪುರ ನಾಗೇಂದ್ರ

Update: 2025-06-25 16:44 IST

ಬೆಂಗಳೂರು : ಭೂಮಿ ತಂಟೆಗೆ ಬಂದರೆ ಯಾವ ಸರಕಾರವೂ ಉಳಿಯುವುದಿಲ್ಲ. ರಾಜ್ಯ ಸರಕಾರಕ್ಕೆ ಇಂದು ಸಂಜೆ 5 ಗಂಟೆಯವರೆಗೆ ಗುಡುವು ನೀಡುತ್ತೇವೆ. ಈ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಇದ್ದರೆ, ನಮ್ಮ ಹೋರಾಟದ ಸ್ವರೂಪರ ಬದಲಾಗಲಿದೆ. ಎಂ.ಬಿ.ಪಾಟೀಲರ ಕುರ್ಚಿ ಮುರಿಯಲಿದೆ ಎಂದು ರಾಜ್ಯ ರೈತ ಸಂಘದ ನಾಯಕ ಬಡಗಲಪುರ ನಾಗೇಂದ್ರ ಹೇಳಿದರು.

ರೈತರ ಭೂ ಸ್ವಾಧೀನ ವಿರೋಧಿಸಿ ದೇವನಹಳ್ಳಿ ಹಳೆ ಬಸ್‌ ನಿಲ್ದಾಣದ ಬಳಿ ಹಮ್ಮಿಕೊಂಡಿರುವ ‘ದೇವನಹಳ್ಳಿ ಚಲೋ’ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, “13 ಹಳ್ಳಿಗಳ ಜನರು ಈ ಸರಕಾರದ ಒಡೆದಾಳುವ ನೀತಿಯ ವಿರುದ್ಧ ತಮ್ಮ ಧೃಡತೆಯನ್ನು ಪ್ರತಿಜ್ಞೆ ಮೂಲಕ ಸ್ಪಷ್ಟ ಸಂದೇಶ ಕಳಿಸಿದ್ದೇವೆ” ಎಂದರು.

ಕಾರ್ಖಾನೆಗಳಿಗೆ ಭೂಮಿ ಬೇಕು ನಿಜ. ಇಲ್ಲಿರುವವರು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಯಾವ ರೀತಿಯ ಅಭಿವೃದ್ಧಿ ಎಂದು ಯೋಚಿಸಬೇಕಿದೆ. ಕೆಲವೇ ಕೆಲವು ವ್ಯಕ್ತಿಗಳನ್ನು ಶ್ರೀಮಂತರನ್ನಾಗಿ ಮಾಡುವ ನೀತಿ ವಿರುದ್ಧ ನಮ್ಮ ಹೋರಾಟ. ರೈತರ ಭೂ ಸ್ವಾಧೀನದ ವಿರುದ್ದ ಶೇ.77ರಷ್ಟು ಜನರು ತಮ್ಮ ಅಸಮ್ಮತಿಯನ್ನು ಸೂಚಿಸಿ ಸರಕಾರಕ್ಕೆ ಮನವಿಪತ್ರ ನೀಡಿದ್ದಾರೆ ಎಂದು ಹೇಳಿದರು.

ವಿಶ್ವವಾಣಿಜ್ಯ ಒಪ್ಪಂದದ ಬಳಿಕ ಆಡಳಿತ ನಡೆಸುವವರ ಕಣ್ಣು ದುಡಿಯುವ ಜನರ ಮೇಲಿದೆ. ಶೇಕಡ 60ರಷ್ಟಿರುವ ರೈತರು ಶೇಕಡ 60ರಷ್ಟು ಉದ್ಯೋಗ ಸೃಷ್ಟಿಸಿದ್ದೇವೆ. ನಮ್ಮನ್ನು ಶೇಕಡ 20ಕ್ಕೆ ಇಳಿಸುವ ಹುನ್ನಾರವನ್ನು ಸರಕಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ವಾಣಿಜ್ಯ ಒಪ್ಪಂದವನ್ನು ಆಗಿನ ಬಿಜೆಪಿ ನಾಯಕರಾಗಿದ್ದ ಮುರಳಿ ಮನೋಹರ್ ಜೋಶಿ ಮತ್ತು ಅಡ್ವಾಣಿ ವಿರೋಧಿಸಿದ್ದರು. ಕಾಂಗ್ರೆಸ್‌ ಸರಕಾರದ ನೀತಿಯನ್ನು ಬಿಜೆಪಿ ವಿಮಾನಕ್ಕಿಂತ ಹೆಚ್ಚಿನ ವೇಗದಲ್ಲಿ ಜಾರಿ ಮಾಡಿತು. ಅದರ ಭಾಗವಾಗಿ ಬೆಂಗಳೂರು ಸುತ್ತಮುತ್ತಲಿನ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಅದಕ್ಕೆ ಇಲ್ಲಿನ ಕಾಂಗ್ರೆಸ್ ಸರಕಾರ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ವಿಪಕ್ಷ ನಾಯಕರಾಗಿದ್ದಾಗ ನಿಮ್ಮ ಹೋರಾಟಕ್ಕೆ ನೂರಕ್ಕೆ ನೂರು ಬೆಂಬಲ ಎಂದು ಹೇಳಿ, ಬಲಾತ್ಕಾರದ ಭೂ ಸ್ವಾಧೀನ ವಿರೋಧಿಸಿದ್ದರು. ಸರಕಾರ ಅಧಿಕಾರಕ್ಕೆ ಬಂದರೆ ಅಧಿಸೂಚನೆ ರದ್ದು ಮಾಡುವುದಾಗಿ ಹೇಳಿದ್ದರು. ಆದರೆ, ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಸರಕಾರ ರೈತರ ಬದುಕಿನ ಜೊತೆಗೆ ಚೆಲ್ಲಾಟ ಆಡುತ್ತಿದೆ ಎಂದು ಬೇಸರ ಕಿಡಿಕಾರಿದರು.

ಸಚಿವರಾದ ಎಂ.ಬಿ ಪಾಟೀಲ್ ಮತ್ತು ಕೆ.ಎಚ್ ಮುನಿಯಪ್ಪ ಸುದ್ದಿಗೋಷ್ಠಿ ನಡೆಸಿ 493 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈಬಿಟ್ಟು ಉಳಿದ ಭೂಮಿ ಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅವರು ಹೊಸತೇನೂ ಹೇಳಿಲ್ಲ. ರೈತರಿಗೆ ಅಭಿವೃದ್ಧಿಪಡಿಸಿದ ಭೂಮಿಯನ್ನೂ ಕೊಡುತ್ತೇವೆ ಎಂದು ಹೇಳಿದ್ದಾರೆ. ರೈತಕುಲವನ್ನು ನಿರ್ವಂಶ ಮಾಡಲು ಸರಕಾರ ನಿರ್ಧರಿಸಿದಂತಿದೆ ಎಂದು ಆಕ್ರೋಶ ಹೊರಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News