×
Ad

ಎತ್ತಿನಹೊಳೆಯಿಂದ ಶೀಘ್ರ ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಕುಡಿಯುವ ನೀರು: ಡಿ.ಕೆ.ಶಿವಕುಮಾರ್

Update: 2025-05-08 20:01 IST

ಬೆಂಗಳೂರು: ಎತ್ತಿನಹೊಳೆಯಿಂದ ಶೀಘ್ರದಲ್ಲಿಯೇ ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಕುಡಿಯುವ ನೀರು ನೀಡಲಾಗುತ್ತದೆ. ಆ ನೀರಿನಿಂದ ಕೆರೆಗಳನ್ನು ತುಂಬಿಸಿ ಅಂತರ್ಜಲವು ಸಹ ಹೆಚ್ಚಳವಾಗಲಿದೆ. ಇದೆಲ್ಲವು ರೈತರಿಗಾಗಿ ನಮ್ಮ ಸರಕಾರ ಮಾಡುತ್ತಿರುವ ಸೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ವೃಷಭಾವತಿ ಏತ ನೀರಾವರಿ ಯೋಜನೆಯಡಿ 240 ಎಂಎಲ್ ಡಿ ನೀರನ್ನು ಶುದ್ಧೀಕರಿಸಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರಿನ 70 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಗುರುವಾರ ನೆಲಮಂಗಲದಲ್ಲಿ ಭೂಮಿಪೂಜೆ ಸಲ್ಲಿಸಿದ ನಂತರ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವೃಷಭಾವತಿ ನದಿಯ ನೀರನ್ನು ನಾಯಂಡಹಳ್ಳಿ ಬಳಿ ಶುದ್ಧೀಕರಣ ಮಾಡಿದ ನಂತರ ನೆಲಮಂಗಲ ತಾಲೂಕಿನ ಕೆರೆಗಳಿಗೆ ಹರಿಸಲಾಗುತ್ತದೆ. ಶುದ್ಧೀಕರಿಸಿ ನೀಡುತ್ತಿರುವ ನೀರನ್ನು ಕುಡಿಯಲು ಆಗುವುದಿಲ್ಲ. ಆದರೆ ಈ ನೀರು ಬದುಕಿಗೆ ಆಧಾರವಾಗುತ್ತದೆ. ಇತ್ತೀಚೆಗೆ ದುಬೈಗೆ ತೆರಳಿದಾಗ ವಿಲಾಸ್ ರಾವ್ ದೇಶಮುಖ್ ಅವರ ಮಗ ನಮ್ಮ ದೇಶದಿಂದ ಉತ್ತಮ ಗುಣಮಟ್ಟದ ಬೆರಣಿ ರಫ್ತಾಗುತ್ತಿದೆ ಎಂದರು. ಇದರಿಂದ ಖರ್ಜೂರ ಚೆನ್ನಾಗಿ ಬೆಳೆಯುತ್ತದೆ. ನಮ್ಮ ಹಳ್ಳಿಯ ವಸ್ತು ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ ಎಂದು ಅವರು ಹೇಳಿದರು.

ಒಂದಷ್ಟು ಅರಣ್ಯ ಭೂಮಿಯ ಕಾರಣಕ್ಕೆ ರಾಜ್ಯದ ಒಂದಷ್ಟು ನೀರಾವರಿ ಕಾಮಗಾರಿಗಳು ಕುಂಠಿತವಾಗಿದೆ. ಈ ಬಗ್ಗೆ ಬುಧವಾರ ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅವರು ಎತ್ತಿನಹೊಳೆ, ಮಹದಾಯಿ ಯೋಜನೆಯ ಅರಣ್ಯ ಭೂಮಿ ಅಡೆತಡೆಗಳನ್ನು ನಿವಾರಣೆ ಮಾಡುವುದಾಗಿ ಹೇಳಿದ್ದಾರೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಕೆರೆಗಳಿಗೆ ವೃಷಭಾವತಿ ನೀರು ಬಿಡುವುದರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಕೊಳಚೆ ನೀರು ಬಿಡುತ್ತಿದ್ದಾರೆ ಎಂದು ಅನೇಕರು ಮಾಧ್ಯಮಗೋಷ್ಠಿ ನಡೆಸುತ್ತಿದ್ದಾರೆ ಎಂದು ನೆಲಮಂಗಲ ಶಾಸಕ ಶ್ರೀನಿವಾಸ್ ನನಗೆ ಹೇಳಿದರು. ಅದಕ್ಕೆ ನಾನು ‘ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ' ಎಂದು ಅವರಿಗೆ ಹೇಳಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ನಮ್ಮ ಚನ್ನಪಟ್ಟಣ ಭಾಗದಲ್ಲಿ ಸ್ವಲ್ಪ ಜಾಗವಿದ್ದರೂ ತುಳಸಿ ಬೆಳೆದು ಜೀವನ ಮಾಡುತ್ತಿದ್ದಾರೆ. ಅರ್ಧ ಎಕರೆ ಜಾಗವಿದ್ದವರು ವೀಳ್ಯದೆಲೆ ಬೆಳೆಯುತ್ತಿದ್ದಾರೆ. ಕನಕಪುರದಲ್ಲಿ ಕನಕಾಂಬರ, ಕಾಕಡ ಹೂವು ಬೆಳೆದು ಜೀವನ ಮಾಡುತ್ತಿದ್ದಾರೆ. ನಮಗೆ ನೀರಿನ ಬೆಲೆ ಅರ್ಥವಾಗಬೇಕು ಎಂದರೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹೋಗಿ ನೋಡಬೇಕು ಎಂದು ಅವರು ತಿಳಿಸಿದರು.

ಆದರೂ ರೇಷ್ಮೆ, ಹಾಲು ಉತ್ಪಾದನೆಯಲ್ಲಿ ಆ ಎರಡು ಜಿಲ್ಲೆಗಳು ಮುಂಚೂಣಿಯಲ್ಲಿವೆ. ಈಗ ತರಕಾರಿ ಬೆಳೆಯುತ್ತಿದ್ದಾರೆ. ದೇವನಹಳ್ಳಿ ಭಾಗದಲ್ಲಿ ಈ ಹಿಂದೆ ದ್ರಾಕ್ಷಿ ಬೆಳೆಯುತ್ತಿದ್ದರು. ರೇಷ್ಮೆಗೂ ಉತ್ತಮ ಬೆಲೆ ಬಂದಿದೆ. ಈಗ ಬಾಗಲಕೋಟೆ, ವಿಜಯಪುರ ಭಾಗದಲ್ಲಿಯೂ ರೇಷ್ಮೆ ಬೆಳೆಯುತ್ತಿದ್ದಾರೆ. ಹೂಗಳನ್ನು ಬೆಳೆದು ದೇವನಹಳ್ಳಿ ವಿಮಾನ ನಿಲ್ದಾಣದ ಮೂಲಕ ರಫ್ತು ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ನಮ್ಮ ಸರ್ಕಾರ ಎಲ್ಲಾ ರಂಗಗಳನ್ನೂ ಅಭಿವೃದ್ಧಿ ಮಾಡುತ್ತಿದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಕ್ಕೆ ಗ್ಯಾರಂಟಿಗಳನ್ನು ನೀಡುತ್ತಿದೆ. 10 ಗ್ರಾಂ ಚಿನ್ನದ ಬೆಲೆ 30 ಸಾವಿರದಿಂದ ಒಂದು ಲಕ್ಷ ರೂ.ಗಳಿಗೆ ಏರಿದೆ. ಬಡ ಹೆಣ್ಣು ಮಕ್ಕಳ ಮದುವೆಗೆ ತಾಳಿ ನೀಡಲು ಆಗುತ್ತಿಲ್ಲ. ಓಲೆ, ಜುಮುಕಿ ತೆಗೆದುಕೊಳ್ಳಲು ಆಗದಂತಹ ಪರಿಸ್ಥಿತಿ ಬಂದಿದೆ. ನಾವು ಹೆಣ್ಣುಮಕ್ಕಳ ಪರವಾಗಿ ನಿಂತಿದ್ದೇವೆ. ಉಚಿತ ಬಸ್, ಗೃಹಲಕ್ಷ್ಮೀ ಹಣ ನೀಡುತ್ತಿದ್ದೇವೆ. ಇದನ್ನು ದಳ, ಬಿಜೆಪಿಯವರು ಮಾಡಿದ್ದರೇ? ಎಂದು ಉಪ ಮುಖ್ಯಮಂತ್ರಿ ಪ್ರಶ್ನಿಸಿದರು.

ನೆಲಮಂಗಲ ಶಾಸಕ ಶ್ರೀನಿವಾಸ್ ಬಹಳ ಪ್ರಗತಿಪರವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ. ನೆಲಮಂಗಲಕ್ಕೆ ಮೆಟ್ರೋ ಬರಬೇಕು, ಯುಜಿಡಿ ಬರಬೇಕು, ಅಂತರ್ಜಲ ಹೆಚ್ಚಳವಾಗಬೇಕು, ರೈತರ, ಜನಸಾಮಾನ್ಯರ ಬದುಕು ಹಸನಾಗಬೇಕು ಎಂದು ಕೆಲಸ ಮಾಡುತ್ತಿರುವ ವ್ಯಕ್ತಿ. ಇಡೀ ಸರಕಾರವೇ ಅವರ ಪರವಾಗಿ ನಿಂತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಇತರೇ ಪಕ್ಷದ ಬೆಂಬಲಿಗರು ಬಂದು ನಿಮ್ಮ ಸರಕಾರದಿಂದ ಉತ್ತಮ ಅನುಕೂಲವಾಗುತ್ತಿದೆ. ನಮ್ಮೆಲ್ಲರ ಭೂಮಿಯ ಮೌಲ್ಯ ಹೆಚ್ಚಾಗಿದೆ, ನಾವು ನಿಮ್ಮ ಜೊತೆಯೇ ಬಂದು ಸೇರಿಕೊಳ್ಳುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಶ್ರೀನಿವಾಸ್ ಅವರಿಗೆ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News