ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬಹಳಷ್ಟು ಶ್ರಮಿಸುತ್ತಿದೆ: ನಸೀರ್ ಅಹ್ಮದ್

Update: 2024-01-31 16:50 GMT

ಬೆಂಗಳೂರು: ರಾಜ್ಯ ಸರಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಬಹಳಷ್ಟು ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ನಸೀರ್ ಅಹ್ಮದ್  ತಿಳಿಸಿದ್ದಾರೆ.

ಬುಧವಾರ ನಗರದ ಕಬ್ಬನ್‍ಪೇಟೆಯಲ್ಲಿರುವ ಅಬ್ಬಾಸ್‍ಖಾನ್ ಮಹಿಳಾ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರ ಹಲವು ವಿದ್ಯಾರ್ಥಿ ವೇತನಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗಳು, ಶಾಲಾ, ಕಾಲೇಜುಗಳ ಅಭಿವೃದ್ಧಿ ಯೋಜನೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.

ಶಿಕ್ಷಣಕ್ಕೆ ಯಾವುದೇ ಅಡೆತಡೆಗಳಿಲ್ಲ. ಬಡವರೇ ಆಗಿರಲಿ, ಶ್ರೀಮಂತರೇ ಆಗಿರಲಿ ಶಿಕ್ಷಣ ಪಡೆಯುವುದು ಅತಿಮುಖ್ಯ ಜವಾಬ್ದಾರಿ. ಇಂದು ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು, ಸರ್ವರೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂಬ ದೃಷ್ಟಿಯಿಂದ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಹೆಚ್ಚೆಚ್ಚು ಶಿಕ್ಷಣವಂತರಾಗಿ ದೇಶದ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಿ ನಾಡಿಗೆ ಸೇವೆ ಸಲ್ಲಿಸುವಂತಾಗಬೇಕು. ಆಗ ಮಾತ್ರ ನಮ್ಮ ಬದುಕಿಗೆ ಸಾರ್ಥಕತೆ ಸಿಗುತ್ತದೆ. ಅಬ್ಬಾಸ್ ಖಾನ್ ಕಾಲೇಜು ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ. ಈ ಸಂಸ್ಥೆಯ ಕನಸನ್ನು ವಿದ್ಯಾರ್ಥಿಗಳು ನೆರವೇರಿಸಬೇಕು ಎಂದು ನಸೀರ್ ಅಹ್ಮದ್ ತಿಳಿಸಿದರು.

ರಾಜ್ಯ ಸರಕಾರವು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಲಕ್ಷಾಂತರ ರೂ.ಗಳನ್ನು ವಿವಿಧ ವಿದ್ಯಾರ್ಥಿ ವೇತನಗಳ ರೂಪದಲ್ಲಿ ಒದಗಿಸುತ್ತಿದೆ. ಇದನ್ನು ಉಪಯೋಗಿಸಿಕೊಂಡು ಮುಸ್ಲಿಮ್ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುನ್ನೆಲೆ ಬರಬೇಕು. ಕೆಪಿಎಸ್‍ಸಿ, ಯುಪಿಎಸ್‍ಸಿ ತರಬೇತಿಗೂ ಸರಕಾರ ಸೌಲಭ್ಯ ನೀಡುತ್ತಿದೆ. ಇದಿಷ್ಟೇ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯನ್ನೂ ಜಾರಿಗೆ ತಂದಿದೆ. ಇದೆಲ್ಲವೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸರಕಾರ ಮಾಡುತ್ತಿರುವ ಕೆಲಸವಾಗಿದೆ ಎಂದು ನಸೀರ್ ಅಹಮ್ಮದ್ ಹೇಳಿದರು.

ಕಾರ್ಯಕ್ರಮದಲ್ಲಿ ಸೆಂಟ್ರಲ್ ಮುಸ್ಲಿಮ್ ಅಸೋಸಿಯೇಷನ್‍ನ ಅಧ್ಯಕ್ಷ ಝಿಯುಲ್ಲ ಶ್ರಿಫ್ ಸಾಹೇಬ್, ಉಪಾಧ್ಯಕ್ಷ ಫಾರೂಕ್ ಮೊಹಮ್ಮದ್, ಅಬ್ಬಾಸ್‍ಖಾನ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಎಸ್.ವಿದ್ಯಾ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News