ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀನಾಮೆಗೆ ಸೂಚನೆ : ವರದಿ
ಬೆಂಗಳೂರು, ಸೆ. 2: ಭೂ ಒಡೆತನ ಯೋಜನೆಯ ಫಲಾನುಭವಿಗಳಿಂದ ಕಮಿಷನ್ ವಸೂಲಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ರಾಜೀನಾಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಭೋವಿ ಅಭಿವೃದ್ಧಿ ನಿಗಮದಿಂದ ಸುಮಾರು 15 ಕೋಟಿ ರೂ.ಗಳ ವೆಚ್ಚದಲ್ಲಿ ಭೂ ಒಡೆತನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಅದರಲ್ಲಿ 60 ಎಕರೆಯನ್ನು ಖರೀದಿಸಿ, ಫಲಾನುಭವಿಗಳಿಗೆ ಹಂಚಿಕೆ ಮಾಡುವ ಇರಾದೆಯಿತ್ತು. ಈ ಯೋಜನೆಯಲ್ಲಿ ಫಲಾನುಭವಿಗಳಿಂದ ಪ್ರತಿ ಘಟಕ ವೆಚ್ಚ ಕಮಿಷನ್ ನಿಗದಿ ಮಾಡಿರುವುದಾಗಿ ಆರೋಪಗಳಿವೆ.
ಈಗಾಗಲೇ ಬಿಡುಗಡೆಗೊಂಡ 3 ಕೋಟಿ ರೂ. ಅನುದಾನದಲ್ಲಿ ಕಮಿಷನ್ ಪಡೆದು ಅದನ್ನು ನಿಗಮದ ಅಧ್ಯಕ್ಷರಿಗೆ ಮಧ್ಯವರ್ತಿಯೊಬ್ಬರು ನೀಡುವಾಗ, ನಡೆದ ಚರ್ಚೆಗಳು ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜತೆಗೆ ನಿಗಮದ ಅಧ್ಯಕ್ಷ ರವಿಕುಮಾರ್ ಸಚಿವರ ಕಡೆಯವರೆಗೂ ಹಣ ತಲುಪಿಸಬೇಕು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.