ಸರಕಾರಿ ಘೋಷಾ ಆಸ್ಪತ್ರೆಯಲ್ಲಿ ವೈದ್ಯರ ಅಕ್ರಮ; ಇಬ್ಬರು ವೈದ್ಯರು ಸಹಿತ ಐವರ ಅಮಾನತು
ಬೆಂಗಳೂರು, ಸೆ.30: ಅಕ್ರಮ ಗರ್ಭಪಾತ, ಗರ್ಭಾಶಯದ ಅನಗತ್ಯ ಶಸ್ತ್ರಚಿಕಿತ್ಸೆ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿರುವ ಪ್ರಕರಣವೊಂದು ಶಿವನಗರದಲ್ಲಿರುವ ಸರಕಾರಿ ಎಚ್‌ಎಸ್‌ಐಎಸ್ ಘೋಷಾ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ತನಿಖಾ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಈ ಅಕ್ರಮ ಬಹಿರಂಗಗೊಂಡಿದ್ದು, ಎಚ್ ಎಸ್ ಐಎಸ್ ಘೋಷಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ದೀಪಿಕಾ, ಸ್ತ್ರೀರೋಗ ತಜ್ಞೆ ಡಾ.ರಮ್ಯಾ ಸೇರಿದಂತೆ ಒಟ್ಟು ಐದು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹಸಿನ್ ಆದೇಶ ಹೊರಡಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಘೋಷಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿನ ಹಲವು ಅಕ್ರಮಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಯ ಸಿಬ್ಬಂದಿಯೇ ನೀಡಿದ ದೂರಿನನ್ವಯ ಆಗಸ್ಟ್ 8ರಂದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಹಾಗೂ ಡಿಡಿ ರಾಜಕುಮಾರ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿತ್ತು.
ಈ ಸಮಿತಿಯು ಸೆ.18ರಂದು ಸಲ್ಲಿಸಿದ ವರದಿಯಲ್ಲಿ ವೈದ್ಯಕೀಯ ಉಪಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವುದು, ರೋಗಿಗಳಿಂದ ಯುಪಿಐ ಆಧಾರಿತ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ ಮಾಡುವುದು, ಅಕ್ರಮ ಗರ್ಭಪಾತ, ಗರ್ಭಾಶಯದ ಅನಗತ್ಯ ಶಸ್ತ್ರಚಿಕಿತ್ಸೆ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರ ಸೇರಿ ಹಲವು ಗಂಭೀರ ಆರೋಪಗಳು ದೃಢಪಟ್ಟಿವೆ.
ಈ ಕುರಿತು ಮಾತನಾಡಿದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಹಸಿನ್, ತನಿಖಾ ಸಮಿತಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಲೋಪದೋಷಗಳು ದೃಢಪಟ್ಟ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಕುರಿತು ಉನ್ನತ ಮಟ್ಟದ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.