ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪಡೆಯುವ ಜ್ಞಾನವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು : ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು ವಿವಿಯಲ್ಲಿ 60ನೇ ಘಟಿಕೋತ್ಸವ
ಬೆಂಗಳೂರು, ಅ.8: ಶಿಕ್ಷಣದ ಉದ್ದೇಶ ಕೇವಲ ಜ್ಞಾನವನ್ನು ಗಳಿಸುವುದಲ್ಲ. ಅದನ್ನು ಸಮಾಜದ ಕಲ್ಯಾಣಕ್ಕಾಗಿ ಉಪಯೋಗಿಸುವುದಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪಡೆಯುವ ಜ್ಞಾನವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.
ಬುಧವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿವಿ ಹಮ್ಮಿಕೊಂಡಿದ್ದ 60ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿಶ್ವ ವಿದ್ಯಾನಿಲಯ ‘ಜ್ಞಾನಂ ವಿಜ್ಞಾನಸಹಿತಂ’ ಎಂಬ ಧ್ಯೇಯವಾಕ್ಯದ ಅರ್ಥವನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಶ್ರೇಷ್ಠತೆಯ ದಿಕ್ಕಿನಲ್ಲಿ ನಿರಂತರವಾಗಿ ಮುಂದುವರಿಯುತ್ತಿದೆ. ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಸಂಸ್ಥೆಗಳ ಸಹಕಾರದ ಮೂಲಕ ಉನ್ನತ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಸಾಧಿಸಿರುವುದು ಹೆಮ್ಮೆಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳಬೇಕು. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್‍ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ವೆಂಚರ್ ಕ್ಯಾಪಿಟಲ್ ಫಂಡ್ ಯೋಜನೆಗಳ ಅವಕಾಶಗಳನ್ನು ಬಳಸಿಕೊಂಡು ನವ ಭಾರತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಆರ್‍ಡಿಎಲ್‍ನ ನಿವೃತ್ತ ನಿರ್ದೇಶಕ ಡಾ.ಪ್ರಹ್ಲಾದ ರಾಮರಾವ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಬೆಂಗಳೂರು ವಿವಿ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವೆ ಕೆ.ಟಿ. ಶಾಂತಲಾ, ಕುಲಸಚಿವ ಮೌಲ್ಯಮಾಪನ ಪ್ರೊ.ಸಿ.ಎಸ್.ಕರಿಗಾರ್, ಪ್ರಾಧ್ಯಾಪಕರಾದ ಪ್ರೊ.ರಘುನಂದನ್, ಪ್ರೊ.ಪಿ.ಸಿ. ಕೃಷ್ಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಸ್ಪೀಕರ್ ಯು.ಟಿ.ಖಾದರ್ ಅನುಪಸ್ಥಿತಿ: ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ವಿಧಾನ ಪರಿಷತ್‍ನ ಮಾಜಿ ಸದಸ್ಯ ಡಿ.ಮಾದೇಗೌಡ, ಜೆ.ಪಿ.ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ಡಾ.ಟಿ.ಬಿ.ಪ್ರಸನ್ನ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಬೇಕಿದ್ದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ವಿದೇಶಿ ಪ್ರವಾಸದ ಹಿನ್ನೆಲೆಯಲ್ಲಿ ಅನುಪಸ್ಥಿತಿಯಾಗಿದ್ದರು.
30,300 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದು, 157 ವಿದ್ಯಾರ್ಥಿಗಳು 298 ಚಿನ್ನದ ಪದಕಗಳನ್ನು ಸ್ವೀಕರಿಸಿದರು. 61 ವಿದ್ಯಾರ್ಥಿಗಳು 132 ನಗದು ಪ್ರಶಸ್ತಿ ಪಡೆದರು. ಒಟ್ಟು 140 ವಿದ್ಯಾರ್ಥಿಗಳು ಪಿಎಚ್‍ಡಿ ಪದವಿ ಸ್ವೀಕರಿಸಿದರು.
ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬೆಂವಿವಿಯ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಪ್ರೇಮ ಎಸ್. ಒಟ್ಟು 11 ಚಿನ್ನದ ಪದಕ ಪಡೆಯುವ ಮೂಲಕ ಅತಿ ಹೆಚ್ಚು ಪದಕ ಚಿನ್ನದ ಗಳಿಸಿದರು. ಸ್ನಾತಕ ಪದವಿ ವಿಭಾಗದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಹೇಮಂತ ಎಸ್. ಒಟ್ಟು 7 ಚಿನ್ನದ ಪದಕ ಸ್ವೀಕರಿಸಿದರು. ಸ್ವರೂಪ್ ಎನ್. ಮತ್ತು ರಂಜಿತ ಜಾದವ್ 2023-24ನೇ ವರ್ಷದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಸ್ವೀಕರಿಸಿದರು.