×
Ad

ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ : ಜಿಲ್ಲಾಧಿಕಾರಿ

Update: 2025-10-08 22:51 IST

ಬೆಂಗಳೂರು, ಅ.8 : ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕಾ ಕಾರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನ.6ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ. ತಿಳಿಸಿದ್ದಾರೆ.

ಬುಧವಾರ ನಗರದ ಕೆ.ಜಿ.ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ-2025ರ ಸಂಬಂಧ ಮತದಾರರ ಪಟ್ಟಿ ತಯಾರಿಕೆ ಮತ್ತು ಮತದಾರರ ಪಟ್ಟಿ ವಿಶೇಷ ತ್ರೀವ ಪರಿಷ್ಕರಣೆ-2026ರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ನಗರ ಜಿಲ್ಲೆಯ ಎಲ್ಲ 7-ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಹ ಶಿಕ್ಷಕರು ನಮೂನೆ -19ರಲ್ಲಿ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ/ನಿಯೋಜಿತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.

ನಮೂನೆ-19 ಅರ್ಜಿಗಳನ್ನು ನಿಯಮಾನುಸಾರ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ನೀಡಲಾಗಿದ್ದು. ಕೊನೆಯ ದಿನದೊಳಗಾಗಿ ಬರುವಂತಹ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ, ನ.25ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅರ್ಜಿ ಸಲ್ಲಿಸುವ ಅರ್ಹ ಶಿಕ್ಷಕರು ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳೀಯ ನಿವಾಸಿಯಾಗಿರಬೇಕು, ನಿರ್ಧಿಷ್ಟಪಡಿಸಲಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನ ನ.1ಕ್ಕೆ ಆರು ವರ್ಷಗಳ ಪೂರ್ವದ ಅವಧಿಯೊಳಗೆ, ಕನಿಷ್ಠ 3 ವರ್ಷಗಳು ಶಿಕ್ಷಕರಾಗಿ ಪ್ರೌಢಶಾಲಾ ಶಿಕ್ಷಣಕ್ಕಿಂತ ಕಡಿಮೆ ಇಲ್ಲದಂತೆ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡಿರಬೇಕು ಎಂದು ಅವರು ಹೇಳಿದರು.

ಈ 3 ವರ್ಷಗಳ ಅವಧಿಯಲ್ಲಿ ಶಿಕ್ಷಕರು ಒಂದಕ್ಕಿಂತ ಮೇಲ್ಪಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ಅಂತಹ ಅವಧಿಯನ್ನು ಪರಿಗಣಿಸಲಾಗುವುದು ಹಾಗೂ ಪ್ರತ್ಯೇಕವಾಗಿ ಆಯಾ ಶಾಲಾ ಶಿಕ್ಷಣ ಸಂಸ್ಥೆಯಿಂದ ಅನುಬಂಧ-2ರಲ್ಲಿ ಕಡ್ಡಾಯವಾಗಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಜಗದೀಶ್ ತಿಳಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ನಿಗಧಿಪಡಿಸಿರುವ ದಿನಾಂಕದಂದೆ ಮಾಹಿತಿಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೆ ಮಾಹಿತಿಯನ್ನು ನೀಡಲು ವಿಳಂಬ ಮಾಡಬಾರದು. ವಿಳಂಬವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ವಿಶ್ವವಿದ್ಯಾಲಯ ಹಾಗೂ ಡೀಮ್ಡ್ ವಿಶ್ವವಿದ್ಯಾಲಯ ಅಡಿಯಲ್ಲಿ ನೋಂದಣಿಯಾಗಿರುವ ಕಾಲೇಜುಗಳ ಪಟ್ಟಿ ದೊರೆಯಲಿದೆ, ಸಂಬಂಧಿಸಿದ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‍ಗಳಿಗೆ ಪತ್ರವನ್ನು ಬರೆದು ಕಾಲೇಜುಗಳ ಪಟ್ಟಿಯನ್ನು ತರಿಸಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್, ಉಪ ವಿಭಾಗಾಧಿಕಾರಿಗಳಾದ ವಿ.ಆರ್.ವಿಶ್ವನಾಥ್ ಹಾಗೂ ಡಾ.ಕಿರಣ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಗಳು, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News