ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆತ: ಪ್ರಕರಣ ಖಂಡಿಸಿ ಬೀದಿಗಿಳಿದ ದಲಿತ, ರೈತ, ಕಾರ್ಮಿಕರ ಆಕ್ರೋಶ
ಬೆಂಗಳೂರು, ಅ.8: ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿರುವುದನ್ನು ಖಂಡಿಸಿ ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ದಲಿತ, ರೈತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ-ಯುವಜನ, ಸಾಹಿತಿಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ‘ಹಿರಿಯ ವಕೀಲನೊಬ್ಬ ಸಿಜೆಐ ಮೇಲೆ ಶೂ ಎಸೆಯಲು ಪ್ರಯತ್ನ ಮಾಡಿದ್ದರೂ ಅದನ್ನು ಖಂಡಿಸಲು ಪ್ರಧಾನಿ ಮೋದಿ 8 ಗಂಟೆಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ. ವಕೀಲ ಶೂ ಎಸೆದಿರುವುದು ಆಕಸ್ಮಿಕವಲ್ಲ, ಅದರ ಹಿಂದೆ ವ್ಯವಸ್ಥಿತವಾದ ಪಿತೂರಿಯಿದೆ ಎಂದು ದೂರಿದರು.
ಭಾರತದಲ್ಲಿ ಹಿಂದುತ್ವ, ಕೋಮುವಾದಿ ಮತ್ತು ಬ್ರಾಹ್ಮಣ್ಯವನ್ನು ಹೇರುವವರು ನಾಚಿಕೆಪಡಬೇಕು. ವಿಶ್ವಗುರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಜಗತ್ತಿನ ಎದುರು ಭಾರತ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ. ದುರಂತ ಎಂದರೆ ಕರ್ನಾಟಕದ ಬಿಜೆಪಿ ನಾಯಕ ಭಾಸ್ಕರ್ ರಾವ್ ಸಿಜೆಐ ಮೇಲೆ ಶೂ ಎಸೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರಿಗೆ ನಾಚಿಕೆಯಿದ್ದರೆ ಭಾಸ್ಕರ್ ರಾವ್‍ನ್ನು ಕೂಡಲೇ ಆ ಪಕ್ಷದಿಂದ ಹೊರಹಾಕಬೇಕು ಎಂದು ಇಂದೂಧರ ಹೊನ್ನಾಪುರ ಆಗ್ರಹಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಸನಾತನ ಧರ್ಮ ನಿಂತದ್ದು ಅಸಮಾನತೆಯ ಮೇಲೆ. ದಲಿತರಿಗೆ ಒಂದು ಉತ್ತಮ ಹೆಸರಿಟ್ಟುಕೊಳ್ಳುವ ಅಧಿಕಾರವನ್ನು ಮನುಸ್ಮೃತಿ ಕೊಡುವುದಿಲ್ಲ. ಇಂತಹ ಭೀಕರ ಪರಿಸ್ಥಿತಿಯ ನಡುವೆ ಭಾರತದ ವೈವಿಧ್ಯತೆಗೆ ಒಂದು ಸುಂದರವಾದ ವ್ಯಾಕರಣವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಬರೆದರು. ಅದರಿಂದ ಕಳೆದು ಹೋಗುತ್ತಿರುವ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಸನಾತನಿಗಳು ಈ ರೀತಿಯ ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಜೆಐ ಮೇಲೆ ಶೂ ಎಸೆದಿರುವ ಘಟನೆ ದೇಶದ ಹಿಂದುಳಿದ, ದಲಿತರ ಎಚ್ಚರಿಕೆಗೆ ಕಾರಣವಾಗಿದೆ. ಇನ್ನೂ ದೊಡ್ಡ ಮಟ್ಟದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ದಂಗೆ ಆಗಬೇಕಿತ್ತು. ರಾಜ್ಯ ಹಾಗೂ ದೇಶದಲ್ಲಿ ಈ ಕೃತ್ಯವನ್ನು ಖಂಡಿಸಿ ಇನ್ನೂ ದೊಡ್ಡಮಟ್ಟದ ಹೋರಾಟಗಳು ನಡೆಯಬೇಕು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
ದಸಂಸ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ದೇಶದಲ್ಲಿ ಜನರ ಪರವಾಗಿ ಹೋರಾಟ ಮಾಡುವವರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತದೆ. ಜನದ್ರೋಹಿ ಕೆಲಸ ಮಾಡುವವರನ್ನು ರಕ್ಷಿಸಲಾಗುತ್ತದೆ. ಕರ್ನಾಟಕದ ಹೈಕೋರ್ಟ್‍ಗೆ ಮೊಟ್ಟ ಮೊದಲು ತಳ ಸಮುದಾಯದ ನ್ಯಾಯಮೂರ್ತಿ ಭೀಮಯ್ಯ ಅವರನ್ನು ಅಧಿಕಾರ ಸ್ವೀಕಾರ ಮಾಡಲು ಬಿಟ್ಟಿರಲಿಲ್ಲ’ ಎಂದು ತಿಳಿಸಿದರು.
ದೇಶದಲ್ಲಿ ಮನುವಾದಿ ಶಕ್ತಿಗಳು ಸಂವಿಧಾನದ ಮೇಲೆ ದಾಳಿ ಮಾಡುತ್ತಿವೆ. ಮತಗಳನ್ನು ಕದಿಯುವ ಮೂಲಕ ಅಧಿಕಾರಕ್ಕೆ ಬರುತ್ತಿವೆ. ಸಂವಿಧಾನ ವಿರೋಧಿ, ಕೋಮುವಾದಿಗಳನ್ನು ತಿರಸ್ಕಾರ ಮಾಡುವುದು ನಮ್ಮ ಮುಂದೆ ಇರುವ ತೀರ್ಮಾನವಾಗಿದೆ ಎಂದು ಅವರು ತಿಳಿಸಿದರು.
ಇತ್ತೀಚಿಗೆ ಗೃಹಮಂತ್ರಿ ಅಮಿತ್ ಶಾ ಡಾ.ಅಂಬೇಡ್ಕರ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು. ಅದಕ್ಕಾಗಿ ಸಂವಿಧಾನದ ಪರವಾಗಿ ಇರುವವರು ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸದಿದ್ದರೆ, ಮತ್ತೊಂದು ಜರ್ಮನಿ, ಫೆಲೆಸ್ತೀನ್ ನಮ್ಮ ಮುಂದೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪತ್ರಕರ್ತ ಡಾ.ಸಿದ್ದನಗೌಡ ಪಾಟೀಲ್, ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಚಿಂತಕ ಶ್ರೀಪಾದ ಭಟ್, ಹಿರಿಯ ವಕೀಲ ವೆಂಕಟೇಶಗೌಡ, ಹೋರಾಟಗಾರ್ತಿ ಕೆ.ಎಸ್.ವಿಮಲಾ ಮತ್ತಿತರರು ಹಾಜರಿದ್ದರು.