×
Ad

ನ್ಯಾಯಾಲಯದ ನಿರ್ದೇಶನಗಳನ್ನು ತಪ್ಪಾಗಿ ನಿರೂಪಣೆ ಮಾಡುತ್ತಿರುವ ಬಿಜೆಪಿ : ಪ್ರಿಯಾಂಕ್ ಖರ್ಗೆ

Update: 2025-10-19 18:57 IST

ಬೆಂಗಳೂರು : ನಿರೀಕ್ಷೆಯಂತೆ, ರಾಜ್ಯ ಬಿಜೆಪಿ ನ್ಯಾಯಾಲಯದ ನಿರ್ದೇಶನಗಳನ್ನು ತಪ್ಪಾಗಿ ನಿರೂಪಣೆ ಮಾಡಲು ಪ್ರಯತ್ನಿಸುತ್ತಿದೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರವಿವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಚಿತ್ತಾಪುರದಲ್ಲಿ ಇಂದು ಆರೆಸ್ಸೆಸ್ ಮೆರವಣಿಗೆ ಯಾವಾಗ ಹಾಗೂ ಎಲ್ಲಿ ನಡೆಯುತ್ತಿದೆ ಎಂಬುದನ್ನು ಬಿಜೆಪಿ ನಾಯಕರು ತಿಳಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.

ಸತ್ಯ ಸರಳವಾಗಿದೆ: ಚಿತ್ತಾಪುರದಲ್ಲಿ ನಿಗದಿಯಾಗಿರುವ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿಲ್ಲ. ಹೈಕೋರ್ಟ್ ಅರ್ಜಿದಾರರಿಗೆ (ಆರೆಸ್ಸೆಸ್) ನ.2 ತಾರೀಖನ್ನು ತಮ್ಮ ಪಥಸಂಚಲನದ ದಿನವಾಗಿಸಿ ಹೊಸ ಅರ್ಜಿಯನ್ನು ಸಲ್ಲಿಸಲು ನಿರ್ದೇಶಿಸಿದ್ದು, ಆ ಅರ್ಜಿಯ ಕುರಿತು ತನ್ನ ನಿರ್ಧಾರವನ್ನ ಸರಕಾರ ಕೋರ್ಟ್ ಗೆ ಅ.24ರಂದು ತಿಳಿಸಲು ನಿರ್ದೇಶಿಸಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಸುವ್ಯವಸ್ಥೆಯನ್ನು ಸಂರಕ್ಷಿಸುವ, ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಪ್ರಾಥಮಿಕ ಕರ್ತವ್ಯ, ಅಂತಿಮವಾಗಿ ಅಧಿಕಾರ ಹೊಂದಿರುವ ರಾಜ್ಯ ಸರಕಾರದ ಕರ್ತವ್ಯ. ನಾಗರಿಕರು ಅಥವಾ ಸಂಘಟನೆಯಿಂದ ಮಾಡಿದ ವಿನಂತಿಯನ್ನು ಮಂಜೂರು ಮಾಡಲು ಅಥವಾ ನಿಯಂತ್ರಿಸಲು ಸಮಂಜಸವಾದ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪರಿಸ್ಥಿತಿಯ ವಾಸ್ತವತೆಯನ್ನು ಅರಿತು ಮತ್ತು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗಾಗಿ ಸೂಕ್ತ ತೀರ್ಮಾನವನ್ನು ತಲುಪುವುದು ಉತ್ತಮ. ಆದುದರಿಂದ, ನ್ಯಾಯಾಲಯದ ನಿರ್ದೇಶನದಂತೆ ಅನುಮತಿ ಕೋರಿ ದಯವಿಟ್ಟು ನಿಮ್ಮ ಅರ್ಜಿಯನ್ನು ಮತ್ತೊಮ್ಮೆ ಸಲ್ಲಿಸಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News