×
Ad

ರಾಜ್ಯದೆಲ್ಲಡೆ ದೀಪಾವಳಿ ಹಬ್ಬದ ಸಂಭ್ರಮ

Update: 2025-10-21 00:31 IST

ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ನರಕ ಚತುರ್ದಶಿ, ಬಲಿ ಪಾಡ್ಯಮಿ ಆಚರಿಸಲು, ಹೂ ಹಣ್ಣು ಕಾಯಿ, ತೋರಣ ಸೇರಿದಂತೆ ಎಲ್ಲ ವಸ್ತುಗಳ ದರ ಗಗನಕ್ಕೇರಿದ್ದರೂ, ಬೆಂಗಳೂರಿನಲ್ಲಿ ಜನರು ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಗಾಂಧಿ ಬಜಾರ್, ಹುಸ್ಕೂರು ಮಾರುಕಟ್ಟೆ, ಕಲಾಸಿ ಪಾಳ್ಯ ಮಾರುಕಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ವಸ್ತುಗಳನ್ನು ಗ್ರಾಹಕರು ಖರೀದಿ ಮಾಡಿದರು. ಕೆಲಕಾಲ ಮಾರುಕಟ್ಟೆ ರಸ್ತೆ ಮತ್ತು ಅದರ ಸುತ್ತಮುತ್ತ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ರಾಜ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೂವಿನ ಪೂರೈಕೆ ಕಡಿಮೆಯಾಗಿರುವ ಕಾರಣ ಹೂವಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವು ಸೇರಿದಂತೆ ಬಗೆಬಗೆಯ ಹೂವುಗಳ ಮಾರಾಟ ಭರದಿಂದ ಸಾಗಿದೆ.

ಈ ಹಿಂದೆ ಕೆಜಿ ಚೆಂಡು ಹೂಗೆ 80 ರೂ. ಇತ್ತು ಆದರೆ, ಹಬ್ಬ ಎಂದು 150 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ದೀಪಾವಳಿಯಲ್ಲಿ ವಿಶೇಷವಾಗಿ ಬಳಸುವ ಸೇವಂತಿ ಹೂವಿಗೆ 300 ರೂ.ಯಿಂದ 350 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಮೊಳ ಕನಕಾಂಬರ ಹೂವಿಗೆ 300 ರೂಪಾಯಿಯಾದರೆ, ಮಲ್ಲಿಗೆಗೆ 400ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ.

ಪೂಜೆಗೆ ಅಗತ್ಯವಾದ ಬಾಳೆಕಂದು ಜೋಡಿಗೆ 60 ರೂಪಾಯಿಯಾದರೆ, ಮಾವಿನ ತೋರಣ ಒಂದಕ್ಕೆ 40 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಮಣ್ಣಿನ ಹಣತೆಗಳು ಗಾತ್ರಕ್ಕೆ ಅನುಗುಣವಾಗಿ ಡಜನ್‍ಗೆ 50 ರಿಂದ 150ರ ರೂಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ.

ಪಟಾಕಿ ಖರೀದಿ ಜೋರು : ಬಸವನಗುಡಿ, ಜಯನಗರ, ಉತ್ತರಹಳ್ಳಿ, ಚಾಮರಾಜಪೇಟೆ, ವಿಲ್ಸನ್ ಗಾರ್ಡನ್‍ನ ರೆಡ್ ಫೀಲ್ಡ್ ಸೇರಿದಂತೆ ಬೆಂಗಳೂರು ನಗರದ 87 ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಪರ್ಮೀಷನ್ ಕೊಟ್ಟಿದೆ. ಈ ಬಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಹಿನ್ನೆಲೆ, ಬಹುತೇಕ ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದೆ. ತಮಿಳುನಾಡಿನ ಶಿವಕಾಶಿ ಮತ್ತು ಹೊಸೂರಿನಲ್ಲಿ ಪಟಾಕಿ ತಯಾರಿಸುವ ಪ್ರದೇಶವಾಗಿದ್ದು, ಇಲ್ಲಿಂದ ಬೆಂಗಳೂರಿಗೆ ತಂದು ಮಾರಾಟ ಮಾಡಲಾಗುತ್ತಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಶೇ.15ರಷ್ಟು ಪಟಾಕಿ ಬೆಲೆ ಏರಿಕೆ ಮಾಡಲಾಗಿದ್ದು, ವ್ಯಾಪಾರಿಗಳು ಸಂತಸಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News