ಬೆಂಗಳೂರು | ಪಟಾಕಿ ಕಿಡಿ ತಾಗಿದ್ದಕ್ಕೆ ಇಬ್ಬರ ಮೇಲೆ ಹಲ್ಲೆ: ಐವರ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.21: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ಬಾಲಕರು ಸೇರಿ ಐವರನ್ನು ಇಲ್ಲಿನ ಹೆಣ್ಣೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಕಿರಣ್ ಎಂಬುವರು ನೀಡಿದ ದೂರಿನ ಮೇರೆಗೆ ಅಮೀನ್ ಶರೀಫ್, ಸೈಯ್ಯದ್ ಅರ್ಬಾಜ್ ಹಾಗೂ ಸೈಯದ್ ಖಾದರ್ ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ಬಾಲಕರನ್ನು ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅ.19ರಂದು ಬೆಳಗ್ಗೆ ಕಿರಣ್ ಅವರು ಮನೆ ಮುಂದೆ ಪಟಾಕಿ ಹೊಡೆಯುವಾಗ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಆರೋಪಿಯೊಬ್ಬನಿಗೆ ಪಟಾಕಿ ಕಿಡಿ ತಾಕಿದೆ. ಇದರಿಂದ ಅಸಮಾಧಾನಗೊಂಡ ಆತ ಕಿರಣ್‍ರೊಂದಿಗೆ ವಾಗ್ವಾದ ನಡೆಸಿದ್ದ. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ತನ್ನ ಸಹಚರರನ್ನು ಮಾರಕಾಸ್ತ್ರಗಳ ಸಮೇತ ಕರೆಯಿಸಿಕೊಂಡಿದ್ದ. ನಂತರ ಆತನ ಸಹಚರರು ಕಿರಣ್ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಕಿರಣ್ ಸ್ನೇಹಿತ ಭರತ್ ಎಂಬುವನ ಮೇಲೆಯೂ ಪ್ರಹಾರ ನಡೆಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಐವರ ಗುಂಪು ಮಾರಕಾಸ್ತ್ರಗಳಿಂದ ದಾಳಿ ಮಾಡುತ್ತಿದ್ದಂತೆ ಸ್ಥಳೀಯರು ಮೂವರನ್ನು ಹಿಡಿದಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾರಕಾಸ್ತ್ರ ಹಿಡಿದು ಸಮಾಜದ ಸ್ವಾಸ್ಥ್ಯ ಹಾಳುಗೆಡವಿದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ರೌಡಿಶೀಟ್ ತೆರೆಯಲಾಗುವುದು ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.