ವಾಲ್ಮೀಕಿ ಸಮುದಾಯದ ಅವಹೇಳನ ಆರೋಪ | ಮಾಜಿ ಸಂಸದ ರಮೇಶ್ ಕತ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು, ಅ.21: ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ವಾಲ್ಮೀಕಿ (ನಾಯಕ) ಸಮಾಜ ಮುಖಂಡರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದು, ರಾಜ್ಯ ಸರಕಾರ ಈ ಕೂಡಲೇ ರಮೇಶ್ ಕತ್ತಿ ಅನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಮಂಗಳವಾರ ಬೆಳಗಾವಿ, ತುಮಕೂರು, ರಾಯಚೂರು, ಬಳ್ಳಾರಿ ಸೇರಿದಂತೆ ಹಲವು ಕಡೆಗಳಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಮೇಶ್ ಕತ್ತಿ ಅನ್ನು ಬಂಧಿಸುವಂತೆ ಆಯಾ ವ್ಯಾಪ್ತಿಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ, ರಮೇಶ್ ಕತ್ತಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತಮ್ಮ ಸ್ಥಾನದ ಬಗ್ಗೆ ಅರಿವಿಲ್ಲದೇ ಎಸ್ಟಿ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಅವರ ಮಾತಿನಿಂದ ಸಮಾಜದ ಜನತೆಗೆ ನೋವುಂಟಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಡುತ್ತಿದೆ. ರಮೇಶ್ ಕತ್ತಿ ಮಾತಿನಿಂದ ಬೇರೆ ಬೇರೆ ಸಮುದಾಯಗಳ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ, ರಮೇಶ್ ಕತ್ತಿ ಅವರನ್ನು ಶೀಘ್ರವೇ ಬಂಧಿಸಬೇಕು. ಇಲ್ಲವಾದಲ್ಲಿ ಬರುವ ಅ.24 ರಂದು ವಾಲ್ಮೀಕಿ ಸಮಾಜ ಸೇರಿದಂತೆ ಹಿಂದುಳಿದ ಸಮುದಾಯಗಳಿಂದ ಬೆಳಗಾವಿ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ಸಮಾಜದ ಮತ್ತೋರ್ವ ಮುಖಂಡ ಸುರೇಶ ಗವನ್ನವರ್ ಮಾತನಾಡಿ, ‘ಬೇಡರ ಸಮುದಾಯಕ್ಕೆ ಆಗಿರುವ ಅವಮಾನ ಸಹಿಸುವುದಿಲ್ಲ. ಇತಿಹಾಸವುಳ್ಳ ಜನಾಂಗದ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಒಂದು ಶೋಷಿತ ಸಮುದಾಯವನ್ನು ನಿಂದನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಪ್ರತ್ಯುತ್ತರ ನೀಡಲಾಗುವುದು’ ಎಂದು ಎಚ್ಚರಿಸಿದರು.
‘ಸಮಾಜಕ್ಕೆ ಸಂಬಂಧಿಸಿದ ವಿಷಯ, ಈಗಾಗಲೇ ಪ್ರಕರಣ ದಾಖಲಾಗಿದೆ. ಸಮಾಜದ ಮುಖಂಡರು ನೋಡಿಕೊಳ್ಳುತ್ತಾರೆ. ಸಮಾಜದ ಮುಖಂಡರು ಹಾಗೂ ಪೊಲೀಸ್ ಇಲಾಖೆ ತೀರ್ಮಾನ ಮಾಡುತ್ತದೆ’
-ಸತೀಶ್ ಜಾರಕಿಹೊಳಿ, ಬೆಳಗಾವಿ ಉಸ್ತುವಾರಿ ಸಚಿವ