ಬೆಂಗಳೂರು | ತಿಗಣೆ ಔಷಧಿ ವಾಸನೆ ತಾಳಲಾರದೆ ಪಿಜಿಯಲ್ಲಿ ಬಿ.ಟೆಕ್ ಪದವೀಧರ ಮೃತ್ಯು ಶಂಕೆ
ಬೆಂಗಳೂರು : ಪೇಯಿಂಗ್ ಗೆಸ್ಟ್ (ಪಿಜಿ)ನಲ್ಲಿ ಸಿಂಪಡಿಸಲಾಗಿದ್ದ ತಿಗಣೆ ಔಷಧಿ ವಾಸನೆ ತಾಳಲಾರದೆ ಬಿ.ಟೆಕ್ ಪದವೀಧರ ಅಸ್ವಸ್ಥಗೊಂಡು ಮೃತಪಟ್ಟಿರುವ ಆರೋಪ ಕೇಳಿಬಂದಿದೆ.
ಆಂಧ್ರ ಪ್ರದೇಶದ ತಿರುಪತಿಯ ನಿವಾಸಿಯಾದ ಪವನ್ (21) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪವನ್ ತಿಗಣೆ ಔಷಧಿ ವಾಸನೆ ತಾಳಲಾರದೆ ಅಸ್ವಸ್ಥಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ಅಶ್ವತ್ ನಗರದ ಬಿಎಂಆರ್ ಪಿ.ಜಿ.ಯೊಂದರಲ್ಲಿ ಪವನ್ ನೆಲೆಸಿದ್ದರು. ನಗರದ ಐಟಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಊರಿಗೆ ತೆರಳಿದ್ದರು.
ಪಿ.ಜಿಯಲ್ಲಿ ತಿಗಣೆ ಸಮಸ್ಯೆ ಹೆಚ್ಚಾಗಿದ್ದರಿಂದ ಔಷಧಿ ಸಿಂಪಡಿಸಲು ಪಿ.ಜಿ.ಮಾಲೀಕರು ಪವನ್ ಉಳಿದುಕೊಂಡಿದ್ದ ಕೊಠಡಿಯ ಮಾಸ್ಟರ್ ಕೀ ಬಳಸಿ ರೂಮಿಗೆ ಹೋಗಿ ಔಷಧಿ ಸಿಂಪಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಊರಿಗೆ ಹೋಗಿದ್ದ ಪವನ್ ಅ.19ರಂದು ಪಿಜಿಗೆ ವಾಪಸ್ ಆಗಿದ್ದರು. ಎಂದಿನಂತೆ ರಾತ್ರಿ ಮಲಗಿದ್ದು, ಮಾರನೇ ದಿನ ಬೆಳಗ್ಗೆ ಅಸ್ವಸ್ಥಗೊಂಡಿದ್ದರು. ವಿಷಯ ತಿಳಿದು ಕೂಡಲೇ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.