×
Ad

ಬೆಂಗಳೂರು | ಆನ್‍ಲೈನ್ ಬೆಟ್ಟಿಂಗ್ ಗೀಳು: ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆ ಬಂಧನ

Update: 2025-10-30 23:45 IST

ಸಾಂದರ್ಭಿಕ ಚಿತ್ರ 

ಬೆಂಗಳೂರು : ಆನ್‍ಲೈನ್ ಬೆಟ್ಟಿಂಗ್ ಗೀಳಿನಿಂದ ಹಣಕ್ಕಾಗಿ ತಾನು ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಡಿ ಮಹಿಳೆಯನ್ನು ಇಲ್ಲಿನ ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳಾ(32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸದ್ಯ ಬಂಧಿತಳಿಂದ 450 ಗ್ರಾಂ ಚಿನ್ನ ಹಾಗೂ 3 ಕೆ.ಜಿ. ಬೆಳ್ಳಿ ವಶಕ್ಕೆ ಪಡೆಯಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ 2ನೇ ಹಂತದಲ್ಲಿ ವಾಸವಿದ್ದ ಆಶಾ ಜಾಧವ್ ಎಂಬವರು ತಮ್ಮ ತಾಯಿಯನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಮಂಗಳಾ ಎಂಬಾಕೆಯನ್ನು ಕೇರ್ ಟೇಕರ್ ಆಗಿ ನೇಮಿಸಿಕೊಂಡಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಆಶಾ ಅವರ ತಾಯಿಯನ್ನು ಮಂಗಳಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.

58 ವರ್ಷ ವಯಸ್ಸಿನ ಆಶಾ ಜಾಧವ್ ಅವರ ಪತಿ ಮೃತಪಟ್ಟಿದ್ದು, ದಂಪತಿಗೆ ಮಕ್ಕಳಿಲ್ಲ. ಜೆ.ಪಿ. ನಗರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ಆಶಾ ಜಾಧವ್, ಮಂಗಳಾ ಅವರನ್ನೇ ತಮ್ಮ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಒಂದೂವರೆ ಕೋಟಿ ರೂ. ಮೌಲ್ಯದ ಮನೆಯನ್ನು ಮಂಗಳಾ ಹೆಸರಿಗೆ ಬರೆದಿದ್ದರು ಎಂದು ಹೇಳಲಾಗಿದೆ.

ಕೆಲ ವರ್ಷಗಳ ಹಿಂದೆ ಆಶಾ ಜಾಧವ್ ಅವರ ತಾಯಿ ಮೃತಪಟ್ಟ ಬಳಿಕ ಇರುವ ಆಸ್ತಿಯನ್ನು ತಾವು ತಾನೇ ಏನು ಮಾಡಬೇಕೆಂದು ಮಂಗಳಾ ಹೆಸರಿಗೇ ಬರೆದಿದ್ದರು. ಆದರೆ, ಆನ್‍ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ ಮಂಗಳಾ, ತನ್ನ ಪ್ರಿಯಕರನ ಜೊತೆ ಪಾರ್ಟಿ, ಪಬ್ ಎಂದು ಸುತ್ತಾಡುತ್ತಾ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದಳು. ಇಷ್ಟಾದರೂ ಸಹ ಮಂಗಳಾ ಮಾಡಿಕೊಂಡಿದ್ದ 40 ಲಕ್ಷ ರೂ. ಸಾಲವನ್ನು ಆಶಾ ಜಾಧವ್ ಅವರೇ ತೀರಿಸಿದ್ದರು ಎಂದು ತಿಳಿದುಬಂದಿದೆ.

ಇತ್ತ, ಆನ್‍ಲೈನ್ ಬೆಟ್ಟಿಂಗ್ ಸಹವಾಸ ಬಿಡದ ಮಂಗಳಾ ತನ್ನ ಹೆಸರಿಗೆ ಬರೆದಿದ್ದ ಮನೆಯನ್ನೂ ಮಾರಾಟ ಮಾಡಿ ಹಣ ಕಳೆದುಕೊಂಡಿದ್ದಳು. ಆದರೂ ಸಹ ಆಕೆಯನ್ನು ಜೊತೆಯಲ್ಲಿಟ್ಟುಕೊಂಡು ಆಶಾ ಜಾಧವ್ ಅವರೇ ಸಾಕುತ್ತಿದ್ದರು. ಇಷ್ಟಾದರೂ, ಆನ್‍ಲೈನ್ ಬೆಟ್ಟಿಂಗ್ ಮುಂದುವರೆಸಿದ್ದ ಮಂಗಳಾ ಇತ್ತೀಚೆಗೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದು, ಬೀರುವಿನ ಬೀಗವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು ಎನ್ನಲಾಗಿದೆ.

ಬೀಗ ಕಳೆದಿರಬಹುದು ಎಂದು ಕೆಲ ದಿನಗಳ ಕಾಲ ಸುಮ್ಮನಿದ್ದ ಆಶಾ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಕಲಿ ಬೀಗದ ಮೂಲಕ ಬೀರು ತೆಗೆಸಿದಾಗ 450 ಗ್ರಾಂ ಚಿನ್ನ ಹಾಗೂ 3 ಕೆ.ಜಿ. ಬೆಳ್ಳಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.

ಮನೆಯಲ್ಲಿ ಯಾರೋ ಅಪರಿಚಿತರು ಕಳ್ಳತನ ಮಾಡಿರಬಹುದೆಂದು ಜೆ.ಪಿ.ನಗರ ಠಾಣೆಗೆ ಆಶಾ ಜಾಧವ್ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಮಂಗಳಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡು ಮಂಗಳಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News