×
Ad

ಸಂಸದ ಕಾಗೇರಿ, ಆರೆಸ್ಸೆಸ್‍ನ ಮುಖಂಡರು ಇತಿಹಾಸವನ್ನು ಸರಿಯಾಗಿ ಓದಿಕೊಳ್ಳಲಿ : ಪ್ರಿಯಾಂಕ್ ಖರ್ಗೆ

Update: 2025-11-06 19:54 IST

ಬೆಂಗಳೂರು : ‘ಜನ ಗಣ ಮನ ರಾಷ್ಟ್ರಗೀತೆಯ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು, ‘ಚರಿತ್ರೆ ತಿರುಚುವ ಕೆಲಸಕ್ಕೆ ಇದೀಗ ಬಿಜೆಪಿಯವರು ಮುಂದಾಗಿದ್ದು, ಇವರೆಷ್ಟು ದೇಶದ್ರೋಹಿಗಳೆಂಬುದು ಇದರಿಂದಲೇ ಗೊತ್ತಾಗುತ್ತದೆ’ ಎಂದು ಟೀಕಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದವರಿಗೆ ಇತಿಹಾಸ ಗೊತ್ತಿಲ್ಲ. ಅವರೆಂದು ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟಿಲ್ಲ. ಜನ ಗಣ ಮನ ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ಬರೆದಿದ್ದು ಎನ್ನುವುದು ಅವರ ಸೃಷ್ಟಿಯಷ್ಟೇ. ವಾಟ್ಸ್‌ ಅಪ್‍ನಲ್ಲಿ ಬರುವ ಸಂದೇಶಗಳನ್ನಷ್ಟೇ ನೋಡುತ್ತಾರೆ, ಇವರ ಶಾಖೆಗಳು ಸುಳ್ಳಿನ ಕಾರ್ಖಾನೆಗಳಿದ್ದಂತೆ’ ಎಂದು ದೂರಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ವಂದೇ ಮಾತರಂ ಗೀತೆ’ಯಿಂದ ಜನ ಪ್ರೇರಣೆಗೊಂಡಿದ್ದು ಸತ್ಯ. ಅನಂತರ ರಾಷ್ಟ್ರಗೀತೆ ಯಾವುದು ಎಂದು ತೀರ್ಮಾನ ಮಾಡಿದ್ದಾರೆ. ಜನ ಗಣ ಮನ ಹಾಗೂ ವಂದೇ ಮಾತರಂ ಗೀತೆಗಳ ಬಗ್ಗೆ ಜನರಿಗೆ ಈಗಲೂ ಗೌರವ ಇದೆ. ಆದರೆ, ಆರೆಸ್ಸೆಸ್‍ನವರಿಗೆ ಗೌರವವಿಲ್ಲ ಅಷ್ಟೇ ಎಂದು ಅವರು ವಾಗ್ದಾಳಿ ನಡೆಸಿದರು.

‘ಮೇಲು-ಕೀಳು ಎಂದು ಪ್ರತಿಪಾದಿಸುವ ಮನುಸ್ಮೃತಿಯನ್ನು ಜಾರಿಗೆ ತಂದವರು ಇದೇ ಆರೆಸ್ಸೆಸ್‍ನವರು. ಜನ ಗಣ ಮಣ ಬ್ರಿಟಿಷರನ್ನು ಗುಣಗಾನ ಮಾಡಲು ಬರೆದಿದ್ದು ಎಂಬುದು ತಪ್ಪು ಕಲ್ಪನೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಆರೆಸ್ಸೆಸ್‍ನ ಮುಖಂಡರು ಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಳ್ಳಲಿ’ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

ಇದೀಗ ಜ್ಞಾನೋದಯ: ಇದೇ ವೇಳೆ ಮಾತನಾಡಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ‘ಬ್ರಿಟಿಷರು ಈ ದೇಶ ಬಿಟ್ಟು ಹೋದ ಬಳಿಕ ನಮ್ಮ ರಾಷ್ಟ್ರಗೀತೆ ಹೇಗಿರಬೇಕು, ಆಡಳಿತ ಹೇಗಿರಬೇಕು ಎಂದು ಅಂದಿನ ಪ್ರಧಾನಿ, ಸಚಿವ ಸಂಪುಟ ನಿರ್ಧಾರ ಮಾಡಿತ್ತು. ಇದೀಗ 78 ವರ್ಷಗಳ ಬಳಿಕ ಬಿಜೆಪಿಯವರಿಗೆ ಜ್ಞಾನೋದಯ ಆಗಿದೆ. ಜನ ಗಣ ಮನ ಗೀತೆಯಲ್ಲಿ ತಪ್ಪೇನಿದೆ?’ ಎಂದು ಕೇಳಿದರು.

ಜನ ಗಣ ಮನ ಗೀತೆಯನ್ನು ಬಿಜೆಪಿಯವರು ಹಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕ್ರಮದಲ್ಲಿ ಈ ಗೀತೆಯನ್ನು ಹಾಡುತ್ತೇವೆ. ಈಗಲೂ ನೆಹರು, ಗಾಂಧೀಜಿ, ಪಟೇಲರ ಬಗ್ಗೆ ಜನ ಮಾತನಾಡ್ತಾರೆ. ಅವರೇ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು. ಇದೀಗ ಚರಿತ್ರೆ ತಿರುಚುವ ಕೆಲಸಕ್ಕೆ ಬಿಜೆಪಿ, ಆರೆಸ್ಸೆಸ್‍ನವರು ಮುಂದಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News