×
Ad

ಬಿಡದಿಯ ‘ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ’ದಲ್ಲಿ ಕಾನೂನು ಉಲ್ಲಂಘನೆ: ಸಿಪಿಸಿಬಿ ವರದಿ

Update: 2025-11-06 23:59 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಬಿಡದಿಯಲ್ಲಿರುವ ‘ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ’ದಲ್ಲಿ ಕಾನೂನು ಉಲ್ಲಂಘನೆ ಮತ್ತು ಸಾರ್ವಜನಿಕರ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು(ಸಿಪಿಸಿಬಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ(ಎನ್‍ಜಿಟಿ) ವರದಿಯನ್ನು ಸಲ್ಲಿಸಿದೆ.

ಜಪಾನ್ ಬ್ಯಾಂಕ್ ಫಾರ್ ಇಂಟನ್ರ್ಯಾಷನಲ್ ಕೋಆಪರೇಷನ್‍ನಿಂದ ಸುಮಾರು 13 ಮಿಲಿಯನ್ ಯುಎಸ್ ಡಾಲರ್ ಸಾಲ ನೆರವಿನಿಂದ ಜಪಾನಿನ ಹಿಟಾಚಿ ಝೋಸೆನ್‍ನ ತಂತ್ರಜ್ಞಾನದೊಂದಿಗೆ ಈ ಸ್ಥಾವರವನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಘಟಕದ ಸ್ಥಾವರ ನಿರ್ವಾಹಕರು ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016 ರ ಅಡಿಯಲ್ಲಿ ಅನುಮತಿಯನ್ನು ಪಡೆದಿಲ್ಲ. ಅತ್ಯಂತ ವಿಷಕಾರಿ ಮತ್ತು ಕ್ಯಾನ್ಸರ್‌ ಕಾರಕ ಮತ್ತು ಮಾಲಿನ್ಯಕಾರಕಗಳಾದ ಡಯಾಕ್ಸಿನ್‍ಗಳು ಮತ್ತು ಫ್ಯೂರಾನ್‍ಗಳನ್ನು ಫ್ಲೂ ಅನಿಲ ಹೊರಸೂಸುವಿಕೆಯಲ್ಲಿ ಮೇಲ್ವಿಚಾರಣೆ ಮಾಡಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.

ಕ್ಯಾಡ್ಮಿಯಮ್, ಥೋರಿಯಮ್, ಪಾದರಸ, ಸ್ಟಿಬಮ್, ಆರ್ಸೆನಿಕ್, ಕ್ರೋಮಿಯಂ ಮತ್ತು ಅವುಗಳ ಸಂಯುಕ್ತಗಳನ್ನು ಫ್ಲೂ ಅನಿಲ ಹೊರಸೂಸುವಿಕೆಯಲ್ಲಿ ಮೇಲ್ವಿಚಾರಣೆ ಮಾಡಲಾಗಿಲ್ಲ. ಸ್ಥಾವರದ ಆನ್‍ಲೈನ್ ಮೇಲ್ವಿಚಾರಣಾ ವ್ಯವಸ್ಥೆಯು ಕರ್ನಾಟಕ/ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸರ್ವರ್‍ಗಳಿಗೆ ಸಂಪರ್ಕ ಹೊಂದಿಲ್ಲ. ಸ್ಥಾವರದಿಂದ ಉತ್ಪತ್ತಿಯಾಗುವ ಪದಾರ್ಥಗಳನ್ನು ಯಾವುದೇ ಮೇಲ್ವಿಚಾರಣೆ ಮತ್ತು ಪರೀಕ್ಷೆಯಿಲ್ಲದೆ ಬಿಡುಗಡೆ ಮಾಡಲಾಗಿದೆ ಎಂದು ವರದಿ ಹೇಳಿದೆ.

ಅಪಾಯಕಾರಿ ವಿಷಕಾರಿ ವಸ್ತುಗಳು ಮತ್ತು ಭಾರ ಲೋಹಗಳನ್ನು ಒಳಗೊಂಡಿರುವ ತಳಬೂದಿ ಮತ್ತು ಹಾರುಬೂದಿಯನ್ನು ಪರೀಕ್ಷಿಸಲಾಗಿಲ್ಲ. ದಿನಕ್ಕೆ ಸರಿಸುಮಾರು 200 ಟನ್‍ಗಳು ಬಹಿರಂಗವಾಗಿ ಭೂಕುಸಿತಗಳಿಗೆ ಎಸೆಯಲಾಗುತ್ತದೆ. ಅಲ್ಲದೆ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳಲ್ಲಿನ ಲೋಪಗಳಿಂದಾಗಿ 2025ರ ಜ.4 ರಂದು ಐದು ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News