×
Ad

ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯನ್ನು ಗೌರವಿಸಿ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಸಮಾಜಮುಖಿ ಸಾಹಿತ್ಯ ಸಮ್ಮೇಳನ ಸಮಾರೋಪ

Update: 2025-11-09 22:56 IST

ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಜನಮುಖಿ, ಸಮಾಜಮುಖಿ ದೃಷ್ಟಿಕೋನವನ್ನು ಇಟ್ಟುಕೊಂಡು ಕಟ್ಟಿ ಬೆಳೆಸಿರುವ ಕನ್ನಡ ಸಾಹಿತ್ಯ ಪರಿಷತ್ತಿನೊಳಗೆ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಕೊಳಕು ಮೂಗನ್ನು ತೂರಿಸಬೇಡಿ. ಯಾಕೆಂದರೆ, ಹೋದಬಾರಿ ನಡೆದ ಚುನಾವಣೆ ಇಂದಿಗೂ ಮೈ ಉರಿಯುವಂತೆ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ರವಿವಾರ ನಗರದ ಕೊಂಡಜ್ಜಿ ಸಭಾಂಗಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯನ್ನು ಗೌರವಿಸಿ. ನಿಮ್ಮ ರಾಜಕೀಯ ಪಕ್ಷದ ಬೇಳೆ ಬೇಯಿಸಿಕೊಳ್ಳಲು ಬರಬೇಡಿ. ಬೇರೆ ಸಂಸ್ಥೆಗಳನ್ನು ಕಬ್ಜಾ ಮಾಡಿಕೊಂಡಿರುವ ರೀತಿಯೊಳಗೆ ಕಸಪಾ ವನ್ನು ಕಬ್ಜಾ ಮಾಡಿಕೊಂಡು ಹೋಗಬೇಡಿ. ಇದು ಇಡೀ ಕನ್ನಡ ಜನತೆ ಪರವಾಗಿ ರಾಜಕೀಯ ಪಕ್ಷಗಳಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ಹೇಳಿದರು.

ನೀವು ದೂರದಲ್ಲಿರಿ, ಕಸಾಪ ಸ್ವಾಯತ್ತೆಯನ್ನು, ಆಶಯವನ್ನು ಗೌರವಿಸಿ. ಇಲ್ಲಿ ಅಧಿಕಾರ ಚಲಾಯಿಸಲು ಹೋಗಬೇಡಿ. ಸಚಿವ ಸಂಪುಟ ಸ್ಥಾನಮಾನ ಕೊಟ್ಟಂತೆ, ಅದರ ಗೌರವ, ಘನತೆ ಕುಗ್ಗಿಸುತ್ತದೆಯೇ ಹೊರತು, ಅದನ್ನು ಹಿಗ್ಗಿಸುವುದಿಲ್ಲ. ಅದನ್ನು ಮೇಲೆತ್ತುವುದಿಲ್ಲ ಮತ್ತು ಅದರ ಅಗತ್ಯತೆಯೂ ಇಲ್ಲ. ಯಾಕೆಂದರೆ ಅಧ್ಯಕ್ಷ ಅಲ್ಲಿ ಅಧಿಕಾರ ಅನುಭವಿಸುವುದಕ್ಕಾಗಿ ಆಯ್ಕೆಯಾಗಿ ಬರುವುದಲ್ಲ, ಸಾಹಿತ್ಯ ಪರಿಷತ್ತಿಗೆ ಸಾಹಿತ್ಯ, ಸಂಸ್ಕೃತಿಗೆ ಸೇವೆ ಮಾಡುವುದಕ್ಕೆ. ಇಡಿ ಸಾಂಸ್ಕೃತಿ, ಸಾಹಿತ್ಯ ವಾತಾವರಣವನ್ನು ರಾಜ್ಯದಲ್ಲಿ ಬೆಳೆಸುವುದಷ್ಟೇ ಅಲ್ಲದೇ, ಈ ದೀಪವನ್ನು ಹೊರಗಡೆಗೂ ಬೆಳಕಾಗಿ ತೋರಿಸುವುದಕ್ಕೆ. ಆ ಕಾರ್ಯದೊಳಗೆ ಈಗಿನ ಸಾಹಿತ್ಯ ಪರಿಷತ್ತು ವಿಫಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷರುಗಳು ನೈತಿಕವಾಗಿ ಎಚ್ಚರಿಕೆಯಿಂದ ಇದ್ದಿದ್ದರೆ ಇಂತಹ ದುರ್ಗತಿ ಬರುತ್ತಿರಲಿಲ್ಲ. ಪ್ರಜಾಸತ್ತಾತ್ಮಕತೆ ಬಿಟ್ಟು, ಸಾರ್ವಭೌಮತ್ವವನ್ನು ಒಪ್ಪಿಕೊಂಡ ದಾಸ್ಯದ ಕಾರಣದಿಂದಾಗಿ ಇಂದು ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಪರಿಸ್ಥಿತಿಗೆ ಬಂದಿರುವುದು. ಹಾಗಾಗಿ ಮುಂದಿನ ದಿನಗಳಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಯಾರಾದರೂ ಆಗಿರಲಿ ಸಾಂಸ್ಕೃತಿಕ, ಸಾಹಿತ್ಯ ಮನಸ್ಸಿನ ಸೂಕ್ಷ್ಮತೆಗಳನ್ನು ಇಟ್ಟುಕೊಂಡಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿದ್ದ ಜಿ.ನಾರಾಯಣ್, ಪಕ್ಷದ ಯಾವುದೇ ಕಿಂಚಿತ್ತು ಸೋಂಕು ಸಾಹಿತ್ಯ ಪರಿಷತ್ತಿಗೆ, ಅದರ ಆಶಯಕ್ಕೆ ತಟ್ಟದ ರೀತಿಯಲ್ಲಿ ಎಚ್ಚರಿಕೆ ವಹಿಸಿ ಸೇವೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ ಮತ್ತು ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿದ್ದಾರೆ. ಅವರನ್ನು ಇಂದಿಗೂ ನೆನಪು ಮಾಡಿಕೊಳ್ಳಬೇಕು. ಸಮಾಜ ಎನ್ನುವುದು ಎಲ್ಲ ಸಮುದಾಯಗಳನ್ನು ಎಲ್ಲ ಜಾತಿಗಳ ಸಂವೇದನೆಯನ್ನು ನಿಜವಾಗಿಯೂ ಪ್ರಜಾಸತ್ತಾತ್ಮಕವಾಗಿ ಒಳಗೊಳ್ಳುವ ಪರಿಭಾಷೆಯೇ ಸಮಾಜ. ಅದನ್ನು ಎರಡು ದಿನಗಳ ಕಾಲ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನ ಮಾಡಿ ತೋರಿಸಿದೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಮಾತನಾಡಿ, ಯಾವ ಬರವಣಿಗೆ ನಮ್ಮಲ್ಲಿ ಆತ್ಮಸ್ಥೈರ್ಯ, ಆತ್ಮಾಭಿಮಾನಗಳನ್ನು ತುಂಬುವುದಿಲ್ಲವೋ ಅಂತಹ ಬರವಣಿಗೆ, ಭಾಷಣ, ಸಮ್ಮೇಳನಗಳು ಪ್ರಯೋಜನವಿಲ್ಲ. ಇದೀಗ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಸಾಹಿತ್ಯ ಸಮ್ಮೇಳನಗಳು ಸರಳವಾಗಬೇಕು. ಕೋಟಿ ಕೋಟಿ ರೂಗಳಲ್ಲಿ ನಡೆಯುವ ಬದಲಿಗೆ ಲಕ್ಷಗಳಲ್ಲಿ ನಡೆಯಬೇಕು. ಕಡಿಮೆ ವೆಚ್ಚದಲ್ಲಿ ಹಲವು ಕಡೆ ನಡೆಯಲಿ. ಆದರೆ ಅದು ಜಾತ್ರೆಯಂತೆ ಆಗಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಗಳಾದ ಡಾ.ಜಿ.ರಾಮಕೃಷ್ಣ, ಮಾಲತಿಪಟ್ಟಣ ಶೆಟ್ಟಿ, ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ, ಅಧಿಕಾರಿ ಬಿ.ಆರ್.ರವಿಕಾಂತೇಗೌಡ, ಪ್ರಕಾಶಮೂರ್ತಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News