×
Ad

ಪ್ರಜಾಪ್ರಭುತ್ವ ಹಲವು ಮೌಲ್ಯಗಳ ಮೇಲೆ ನಿಂತಿದೆ : ರಾಜಾರಾಮ್ ತೋಳ್ಪಾಡಿ

ಸಮಾಜಮುಖಿ ಸಾಹಿತ್ಯ ಸಮ್ಮೇಳನ

Update: 2025-11-09 22:58 IST

ಬೆಂಗಳೂರು : ಪ್ರಜಾಪ್ರಭುತ್ವವು ಕೇವಲ ಒಂದರ ಮೇಲೆ ನಿಂತಿಲ್ಲ, ಅನೇಕ ಮೌಲ್ಯಗಳನ್ನು ಒಳಗೊಂಡಿದೆ. ಅದಕ್ಕೊಂದು ದೊಡ್ಡ ಇತಿಹಾಸವಿದೆ, ಚಳುವಳಿಗಳ ಪರಂಪರೆಯಿಂದ ರೂಪಗೊಂಡಿರುವ ವ್ಯವಸ್ಥೆಯೇ ಆಗಿದೆ ಎಂದು ಪ್ರಾಧ್ಯಾಪಕ ರಾಜಾರಾಮ್ ತೋಳ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಬಿಕ್ಕಟ್ಟಿನಲ್ಲಿ ಗಣತಂತ್ರ ಮತ್ತು ಪ್ರಜಾಪ್ರಭುತ್ವ..?' ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಿನ್ನಮತಕ್ಕೆ ಯಾವ ಸ್ಥಾನಮಾನವಿದೆ, ಆಡಳಿತ ವ್ಯವಸ್ಥೆ ಪ್ರತಿರೋಧಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದರ ಮೇಲೆ ಪ್ರಜಾ ಪ್ರಭುತ್ವದ ಬಿಕ್ಕಟ್ಟು ಅವಲಂಬಿತವಾಗಿದೆ. ಸರ್ವಾಧಕಾರಿಗಳು ಎಂದಿಗೂ ಪ್ರಜಾಪ್ರಭುತ್ವಕ್ಕೆ ಕಂಟಕ ಎಂದರು.

ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕಲ್ಪನೆಯ ಅನುಷ್ಠಾನವೇ ಪ್ರಜಾಪ್ರಭುತ್ವದ ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರ. ಭಾರತದ ಪ್ರಜಾಪ್ರಭುತ್ವ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ದೇಶದ ಜನತಂತ್ರ ಕೇವಲ ಶಾಸಕರು, ಸಂಸದರ ಸುತ್ತ ಸುತ್ತುತ್ತಿದೆ. ಗ್ರಾಮ ಪಂಚಾಯತಿ ಮತ್ತು ಬಿಬಿಎಂಪಿಯ ಚುನಾವಣೆಗಳು ನಡೆದಿಲ್ಲ. ಈ ಬಗ್ಗೆ ಯಾವ ಪಕ್ಷವು ಹೋರಾಟ ಮಾಡುತ್ತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಪ್ರಮುಖ ಬಿಕ್ಕಟ್ಟು ಎಂದು ತಿಳಿಸಿದರು.

ಪ್ರಶ್ನೆ ಮಾಡುವುದೇ ನಿಜವಾದ ಪ್ರಜಾ ಪ್ರಭುತ್ವ. ಜನರ ಸಹಭಾಗಿತ್ವ, ಪ್ರತಿರೋಧ ಹಾಗೂ ಪ್ರತಿಭಟನೆ ಇಲ್ಲದೇ ಪ್ರಜಾಪ್ರಭುತ್ವ ಇಲ್ಲ. ಪ್ರಜಾಪ್ರಭುತ್ವ ಸದ್ಯ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ರಾಜಕಾರಣಿಗಳೇ ಕಾರಣರಲ್ಲ. ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದು, ಕುಟುಂಬ ರಾಜಕಾರಣ, ಜಾತಿ, ಮತ ಆಧಾರಿತ ರಾಜಕಾರಣ, ಭಾವನಾತ್ಮಕ ರಾಜಕಾರಣ, ರಾಜಕಾರಣದ ವ್ಯಾಪಾರಿಕರಣ, ರಾಜಕಾರಣದ ಪಾತಕೀಕರಣ ಮತ್ತು ಚುನಾವಣಾ ಸರ್ವಾಧಿಕಾರತ್ವ ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಸಾಂವಿಧಾನಿಕ ಸಂಸ್ಥೆಗಳಾದ ಆರ್‌ಬಿಐ, ಲೋಕಪಾಲ ಮತ್ತು ಈಗ ಕೇಂದ್ರ ಚುನಾವಣಾ ಆಯೋಗ ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುವ, ತಮ್ಮ ಆಲೋಚನೆಯನ್ನು ಹೇರುವ ಕೆಲಸವಾಗುತ್ತಿದೆ. ರಾಜಕಾರಣದಲ್ಲಿ ಮ್ಯಾನೇಜ್ಮೆಂಟ್, ಪೇಮೆಂಟ್ ಖೋಟಾ ಹೆಚ್ಚಾಗಿ ಮೆರಿಟ್ ಖೋಟಾ ಕಡಿಮೆ ಆಗಿರುವುದು ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಶಾಸನಸಭೆಗಳಲ್ಲಿ ಚರ್ಚೆ ಮೂಲಕ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಬೇಕೇ ವಿನಾಃ, ಗದ್ದಲದ ಮುಖೇನ ಅಲ್ಲ. ಶಾಸನ ಸಭೆಗಳಲ್ಲಿ ಇಂತಿಷ್ಟು ದಿನ ಕಲಾಪ ನಡಿಯಲೇಬೇಕೆಂದು ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟರು.

ಅಂಕಣಕಾರ ಎ.ನಾರಾಯಣ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ಬಿಕ್ಕಟ್ಟು ಇರುವುದು ಹೌದು, ಇಲ್ಲ, ಎಲ್ಲಿದೆ? ಎಂಬ ಎರಡು ಉತ್ತರಗಳ ಮಧ್ಯೆ ನಾವಿಂದು ಇದ್ದೇವೆ. ಜಾತಿ, ಮತ ದ್ವೇಷ, ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡುವ, ಲೆಕ್ಕ ಹೇಳಲಾಗದ ಹೇರಳವಾಗಿ ಹಣ ಖರ್ಚು ಮಾಡುವುದು ಇರುವುದಾದರೆ, ಪೊಲೀಸರು ರೌಡಿಗಳಂತೆ ಕಾಣುವುದು ನಿಜವಾದರೆ, ಸರಕಾರಿ ವ್ಯವಸ್ಥೆ ಕಂಡು ಜನಸಾಮಾನ್ಯರು ತಬರನಂತೆ ಸಿಟ್ಟು ಹೊರಹಾಕುವುದಾದರೆ, ನಮ್ಮ ಪ್ರಜಾಪ್ರಭುತ್ವ ಬಿಕ್ಕಟ್ಟಿನ ಹಾದಿಯನ್ನು ಪ್ರವೇಶ ಮಾಡುತ್ತಿದೆ ಎಂದೇ ಅರ್ಥ ಎಂದರು.

‘ಬುದ್ಧನ ಕಾಲದಿಂದಲೂ ಬಿಕ್ಕಟ್ಟುಗಳು ಇವೆ. ಬಿಕ್ಕಟ್ಟುಗಳು ಕಾಲಾತೀತ. ಕೆಲವೊಮ್ಮೆ ಈ ಬಿಕ್ಕಟ್ಟುಗಳಿಗೆ ಸುವರ್ಣಯುಗವಿರುತ್ತದೆ, ಮತ್ತೊಮ್ಮೆ ಕಬ್ಬಿಣದ ಯುಗ ಇರುತ್ತದೆ. ಬೇರೆ ಬೇರೆ ಸ್ವರೂಪದಲ್ಲಿ ಕಾಣಿಸಿಕೊಳ್ಳುವ ಬಿಕ್ಕಟ್ಟುಗಳನ್ನು ನಾವು ಎಷ್ಟರಮಟ್ಟಿಗೆ ಅನುಭವಿಸುತ್ತೇವೋ ಎಂಬುದರ ಮೇಲೆ ಬಿಕ್ಕಟ್ಟಿನ ಗಂಭೀರತೆ ಅವಲಂಬಿತ’

-ಅಗ್ರಹಾರ ಕೃಷ್ಣಮೂರ್ತಿ, ಸಂಸ್ಕೃತಿ ಚಿಂತಕ

‘ಮುಸ್ಲಿಮರ ರಾಜಕೀಯ ಮತ್ತು ಸಂಸತ್ತಿನ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವುದು ಆರೋಗ್ಯಕರ ಲಕ್ಷಣವಲ್ಲ. ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಬಿಕ್ಕಟ್ಟಿನ ಬಿಸಿ ಒಂದೊಂದು ವರ್ಗಕ್ಕೆ ಒಂದೊಂದು ಬಗೆಯಲ್ಲಿ ತಟ್ಟುತ್ತಿದೆ. ಹಲವು ಆಯಾಮಗಳಲ್ಲಿ ವಿಸ್ತೃತವಾಗಿ ನಡೆದ ಚರ್ಚೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ, ನ್ಯಾಯಾಂಗದ ಮೇಲೆ ಕಾರ್ಯಾಂಗದ ಪ್ರಭಾವ, ಶಾಸನಸಭೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಕಡಿಮೆಯಾಗಿರುವುದು, ಗ್ರಾ.ಪಂ.ಗಳ ಸ್ಥಿತಿಗತಿಯೂ ಸೇರಿದಂತೆ ಪ್ರಜಾಪ್ರಭುತ್ವಕ್ಕೆ ಬಿಕ್ಕಟ್ಟು’

-ಆಯಿಷಾ ಫರ್ಝಾನ ಯು.ಟಿ., ಸಾಮಾಜಿಕ ಕಾರ್ಯಕರ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News