×
Ad

ʼಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿʼಗೆ ಎಚ್.ಎಸ್.ಶಿವಪ್ರಕಾಶ್, ಜಿ.ರಾಮಕೃಷ್ಣ, ಬಿ.ಟಿ.ಜಾಹ್ನವಿ ಆಯ್ಕೆ

Update: 2025-11-10 01:15 IST

ಬೆಂಗಳೂರು : 2023ನೇ ಸಾಲಿನ ‘ಕಾವ್ಯ ಪ್ರಶಸ್ತಿ’ಗೆ ಕವಿ ಡಾ.ಎಚ್.ಎಸ್.ಶಿವಪ್ರಕಾಶ್, 2024ನೇ ಸಾಲಿನ ‘ವೈಚಾರಿಕ-ಪತ್ರಿಕೋದ್ಯಮ ಪ್ರಶಸ್ತಿ’ಗೆ ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಹಾಗೂ 2025ನೇ ಸಾಲಿನ ‘ಕಥಾ ಪ್ರಶಸ್ತಿ’ಗೆ ಲೇಖಕಿ ಬಿ.ಟಿ.ಜಾಹ್ನವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷೆ ವಿನಯಾ ಒಕ್ಕುಂದ ತಿಳಿಸಿದ್ದಾರೆ.

ರವಿವಾರ ಈ ಸಂಬಂಧ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲ್ಕಂಡ ಮೂರು ಪ್ರಶಸ್ತಿಗಳು ತಲಾ 50ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿವೆ. ನ.11ರಂದು ಬೆಳಗಾವಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಯುವ ಸಾಹಿತಿಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ 2023ನೇ ಸಾಲಿನ ‘ಬೆಟಗೇರಿ ಕೃಷ್ಣಶರ್ಮ ಯುವ ಪ್ರಶಸ್ತಿ’ಗೆ ಕೆ.ಅಕ್ಷತಾ, 2024ನೇ ಸಾಲಿಗೆ ವಿಲ್ಸನ್ ಕಟೀಲ ಹಾಗೂ 2025ನೇ ಸಾಲಿಗೆ ಆರಿಫ್ ರಾಜಾ ಅವರು ಆಯ್ಕೆಗೊಂಡಿದ್ದಾರೆ. ಈ ಪ್ರಶಸ್ತಿಯು 10ಸಾವಿರ ರೂಪಾಯಿ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಅವರು ಹೇಳಿದರು.

ಇದೇ ವೇಳೆ ಟ್ರಸ್ಟ್ ವತಿಯಿಂದ ರಾಜ್ಯ ಮಟ್ಟದ ‘ಯುವ ಕಥಾ ಸ್ಪರ್ಧೆ’ ಮತ್ತು ‘ಕಾವ್ಯ ಸ್ಪರ್ಧೆ’ ಹಮ್ಮಿಕೊಂಡಿದ್ದು ಪ್ರಥಮ 5 ಸಾವಿರ ರೂ. ದ್ವಿತೀಯ 3ಸಾವಿರ ರೂ. ಹಾಗೂ ತೃತೀಯ ಬಹುಮಾನ 2 ಸಾವಿರ ರೂ.ಗಳನ್ನು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಕನ್ನಡ ವಿಷಯದಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಬೆಟಗೇರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜಾ) ಸೇಠ್, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವಾಯ್.ಬಿ.ಹಿಮ್ಮಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ ಹಾಗೂ ಬೆಟಗೇರಿಯ ಹನುಮಂತ ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕುರಿತು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಹಾಗೂ ಕರ್ನಾಟಕ ವಿವಿ ಪ್ರಾಧ್ಯಾಪಕಿ ಡಾ.ಅನಸೂಯಾ ಕಾಂಬಳೆ ಮಾತನಾಡಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News