ಬೆಂಗಳೂರು | ಕೆರೆಯ ಬಳಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು : ಕೆರೆಯ ಬಳಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ನ.9ರಂದು ಸಂಜೆ ವೇಳೆ ನಡೆದಿದೆ.
ಮೃತ ಬಾಲಕರನ್ನು 12 ವರ್ಷದ ಅನಿಕೇತ್ ಕುಮಾರ್ ಹಾಗೂ 11 ವರ್ಷದ ರೆಹಮಾತ್ ಬಾಬಾ ಎಂದು ಗುರುತಿಸಲಾಗಿದೆ. ಅನಿಕೇತ್ ಕುಮಾರ್ ಪೋಷಕರು ಬಿಹಾರ ಮೂಲದವರಾಗಿದ್ದು, ರೆಹಮಾತ್ ಬಾಬಾ ಪೋಷಕರು ಆಂಧ್ರ ಮೂಲದವರು ಎಂದು ಹೇಳಲಾಗಿದೆ.
ನ.9ರಂದು ಸಂಜೆ ವೇಳೆಯಲ್ಲಿ ಇಬ್ಬರು ಬಾಲಕರು ಕೂಡ ಕೆಲಹೊತ್ತು ಮನೆಯ ಹತ್ತಿರವೇ ಆಟ ಆಡಿಕೊಂಡಿದ್ದರು. ಅನಂತರ ಆಟ ಆಡುತ್ತಾ ಅವರು ಕೆರೆಯ ಬಳಿ ಹೋಗಿದ್ದು, ಈ ಸಮಯದಲ್ಲಿ ನೀರನ್ನು ನೋಡಿ ಕೆರೆಗೆ ಇಳಿದಿದ್ದಾರೆ. ಆದರೆ, ಈಜು ಬರದ ಕಾರಣ, ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಇಬ್ಬರು ಬಾಲಕರ ಪೋಷಕರು ಮಕ್ಕಳು ಆಟ ಆಡಿಕೊಂಡು ಸುತ್ತ-ಮುತ್ತಲೇ ಇದ್ದಾರೆ ಎಂದು ಭಾವಿಸಿದ್ದರು. ಆದರೆ, ಸಂಜೆ ಆದರೂ ಮಕ್ಕಳು ಮನೆಗೆ ಹಿಂತಿರುಗಿ ಬರದ ಹಿನ್ನೆಲೆಯಲ್ಲಿ ಪೋಷಕರಿಗೆ ಆತಂಕವಾಗಿದೆ. ತಕ್ಷಣವೇ ಮನೆಯ ಸುತ್ತಮುತ್ತ ಹಾಗೂ ಊರಿನಲ್ಲಿ ಸಹ ಹುಡುಕಾಡಿದ್ದಾರೆ. ಆದರೆ, ರಾತ್ರೀ ಪೂರ ಹುಡುಕಿದರೂ ಸಹ ಮಕ್ಕಳ ಸುಳಿವು ಸಿಕ್ಕಿಲ್ಲ. ಮರುದಿನ ಅಂದರೆ ನ.10ರ ಸೋಮವಾರ ಬೆಳಗ್ಗೆ ಕೆರೆಯಲ್ಲಿ ಮಕ್ಕಳ ಮೃತದೇಹ ತೇಲುತ್ತಿರುವುದು ಪತ್ತೆ ಆಗಿದ್ದು, ತಕ್ಷಣವೇ ಗ್ರಾಮಸ್ಥರು ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಬಂದು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.