×
Ad

ಪ್ರತ್ಯೇಕ ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯದಿಂದ ‘ಬೆಳಗಾವಿ ಚಲೋ’

Update: 2025-12-06 01:04 IST

ಸುವರ್ಣ ವಿಧಾನ ಸೌಧ

ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ 49 ಅಲೆಮಾರಿ ಸಮುದಾಯಗಳಿಗೆ ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಶೇ.1ರಷ್ಟು ಮೀಸಲಾತಿಯನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ‘ಬೆಳಗಾವಿ ಚಲೋ’ಗೆ ಕರೆ ನೀಡಿದೆ.

ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಪದಾಧಿಕಾರಿ ಬಿ.ಎಚ್.ಮಂಜುನಾಥ್, ಡಿ.4ರಂದು ನಡೆದ ಸಂಪುಟದಲ್ಲಿ ಸರಕಾರ ಅನೇಕ ವಿಚಾರಗಳ ಕುರಿತು ನಿರ್ಧಾರ ತೆಗೆದುಕೊಂಡಿದೆ. ಆದರೆ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿಗಳ ಬಗ್ಗೆ ಯಾವುದೇ ಚರ್ಚೆಯಾಗಲಿ, ತೀರ್ಮಾನವಾಗಲಿ ತೆಗೆದುಕೊಳ್ಳದೆ ಸಂಪುಟ ಮುಕ್ತಾಯಗೊಂಡಿರುವುದು ಅಲೆಮಾರಿಗಳಿಗೆ ಆತಂಕ ಹೆಚ್ಚು ಮಾಡಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅ.31 ರಂದು ಅಲೆಮಾರಿ ಸಮುದಾಯಗಳ ಮುಖಂಡರೊಂದಿಗೆ ಸಭೆ ಕರೆದು, ಶೇ.1 ರಷ್ಟು ಮೀಸಲಾತಿ ನೀಡುವ ಭರವಸೆಯನ್ನು ಕೊಟ್ಟಿದ್ದರು. ಅವರ ಮಾತಿಗೆ ಬೆಲೆಕೊಟ್ಟು ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟೆವು. ಆದರೆ ಇಲ್ಲಿಯವರೆಗೂ ರಾಜ್ಯ ಸರಕಾರ ನಮ್ಮ ಜೊತೆ ಯಾವುದೇ ಸಭೆ, ಸಮಲೋಚನೆ ಮಾಡದೆ ವಂಚಿಸುತ್ತಾ ಬಂದಿದೆ. ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ, ಕನಿಷ್ಠ ಪ್ರಮಾಣಪತ್ರವೂ ನೀಡಿಲ್ಲ ಎಂದು ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ಸರಕಾರ ಅಲೆಮಾರಿ ಸಮುದಾಯಕ್ಕೆ ಕೊಟ್ಟ ಮಾತಿಗೆ ಬದ್ಧವಾಗಿದಿಯೇ? ಎಂಬ ಅನುಮಾನ ಇದೆ. ಡಿ.6 ರಂದು(ಇಂದು) ಒಳ ಮೀಸಲಾತಿ ಕುರಿತು ತೀರ್ಮಾನ ತೆಗೆದುಕೊಳ್ಳಲು ಅಧಿಕಾರಿಗಳು ಮತ್ತು ಸಚಿವರುಗಳ ಸಮಾಲೋಚನೆ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲೂ ಶೇ.1ರಷ್ಟು ಮೀಸಲಾತಿ ನೀಡುತ್ತಾರೋ, ಇಲ್ಲವೋ ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡರು, ಬಿಲ್ ತಂದರು ಅಲೆಮಾರಿಗಳು ಹಾಕಿರುವ ತಡೆಯಜ್ಞೆಯನ್ನು ವಾಪಸ್ ತೆಗೆದುಕೊಳ್ಳದಿದ್ದರೆ, ಯಾವುದೇ ಒಳಮಿಸಲಾತಿ ಮತ್ತು ಇಡೀ ನೇಮಕಾತಿ ಪ್ರಕ್ರಿಯೆಯು ಜಾರಿಯಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಅಲೆಮಾರಿಗಳ ವಿಚಾರದಲ್ಲಿ ಸರಕಾರ ತೀರ್ಮಾನಕ್ಕೆ ಬರಲೇಬೇಕಾಗಿದೆ. ಅಲೆಮಾರಿಗಳ ಶೇ.1ರಷ್ಟು ವಿಚಾರದಲ್ಲಿ ಉಡಾಫೆ ಮಾಡಿ ಸಂಪೂರ್ಣ ಒಳಮೀಸಲಾತಿಯನ್ನು ಮತ್ತು ಇಡೀ ನೇಮಕಾತಿಯನ್ನು ಬಿಕ್ಕಟ್ಟಿಗೆ ಸಿಕ್ಕಿಸಿದೆ. ಅಲೆಮಾರಿಗಳಿಗಂತೂ ಅನ್ಯಾಯ ಮಾಡಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು, ಸೂಕ್ತ ರೀತಿಯಲ್ಲಿ ಪರಿಹರಿಸುವುದಕ್ಕೆ ಹೆಜ್ಜೆ ಹಾಕಬೇಕು. ಅಲೆಮಾರಿಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ, ವಿಶೇಷ ಪ್ಯಾಕೇಜ್ ಅನ್ನು ನೀಡುವರೆಗೂ ಬೆಳಗಾವಿಯಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸುತ್ತೇವೆ ಎಂದು ಮಂಜುನಾಥ್ ಎಚ್ಚರಿಕೆ ನೀಡಿದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News