×
Ad

ಐಎಎಸ್ ಅಧಿಕಾರಿ ಎಂ.ವಿ.ವೆಂಕಟೇಶ್ ಅಮಾನತು; ಸಿಎಟಿಯಲ್ಲೇ ಪ್ರಕರಣ ಇತ್ಯರ್ಥವಾಗಲಿ ಎಂದ ಹೈಕೋರ್ಟ್

Update: 2025-11-10 22:11 IST

ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆ ಆಯುಕ್ತರಾಗಿರುವ ಐಎಎಸ್ ಅಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವ ಪ್ರಕರಣ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಲ್ಲಿ (ಸಿಎಟಿ) ಇತ್ಯರ್ಥವಾಗಲಿ ಎಂದು ಹೈಕೋರ್ಟ್ ಹೇಳಿದೆ.

ರಾಜ್ಯ ಸರ್ಕಾರ ಅಕ್ಟೋಬರ್ 30ರಂದು ಹೊರಡಿಸಿರುವ ಅಮಾನತು ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದ ಸಿಎಟಿ ಕ್ರಮ ಪ್ರಶ್ನಿಸಿ ಡಾ. ಎಂ.ವಿ. ವೆಂಕಟೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಸಿಎಟಿ ನಡೆಸುತ್ತಿದೆ. ಎರಡೂ ಕಡೆಯ ವಾದ ಆಲಿಸಿದ ಬಳಿಕ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡುವ ಅರ್ಜಿದಾರರ ಮನವಿ ಪರಿಗಣಿಸಲಾಗುವುದು ಎಂದು ಸಿಎಟಿ ನವೆಂಬರ್ 4ರಂದು ಹೊರಡಿಸಿರುವ ಆದೇಶದಲ್ಲಿ ಹೇಳಿದೆ. ಹೀಗಿರುವಾಗ, ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅವಶ್ಯಕತೆ ಕಾಣಿಸುತ್ತಿಲ್ಲ. ಸಿಎಟಿ‌ಯಲ್ಲೇ ಪ್ರಕರಣ ಮುಂದುವರಿಯಲಿ. ಅರ್ಜಿದಾರರು ತಮ್ಮ ವಾದ, ಸಮರ್ಥನೆ, ಆಕ್ಷೇಪಣೆಗಳೇನೇ ಇದ್ದರೂ ಸಿಎಟಿ ಮುಂದೆ ಮಂಡಿಸಬಹುಸು ಎಂದು ತಿಳಿಸಿ, ಅರ್ಜಿ ಇತ್ಯರ್ಥಪಡಿಸಿತು.

ಪ್ರಕರಣದ ಹಿನ್ನೆಲೆ:

ಬಿಹಾರ ರಾಜ್ಯದ ಕೈಮೂರ ಜಿಲ್ಲೆಯ ಚೈನಪುರ ವಿಧಾನಸಭೆ ಕ್ಷೇತ್ರದ ಸಾಮಾನ್ಯ ವೀಕ್ಷಕರನ್ನಾಗಿ ಡಾ. ಎಂ.ವಿ. ವೆಂಕಟೇಶ್ ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ಹಾಗೂ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದರೂ ಅದನ್ನು ಪರಿಗಣಿಸದೆ ರಾಜ್ಯ ಸರ್ಕಾರ ಅಕ್ಟೋಬರ್ 30ರಂದು ವೆಂಕಟೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ವೆಂಕಟೇಶ್ ಸಿಎಟಿ ಮೆಟ್ಟಿಲೇರಿದ್ದರು. ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸಿಎಟಿ ನಿರಾಕರಿಸಿತ್ತು. ಇದರಿಂದ, ವೆಂಕಟೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News