×
Ad

ವಿಚ್ಚೇದಿತ ಪತ್ನಿಗೆ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣ ಸ್ಫೋಟ ಬೆದರಿಕೆ; ಆರೋಪಿ ಬಂಧನ

Update: 2025-11-19 00:39 IST

ಸಾಂದರ್ಭಿಕ ಚಿತ್ರ 


ಬೆಂಗಳೂರು : ‘ನನ್ನ ವಿಚ್ಚೇದಿತ ಪತ್ನಿಗೆ ಮಾನಸಿಕ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುತ್ತೇನೆ' ಎಂದು ಬಿಎಂಆರ್‍ಸಿಎಲ್ ಅಧಿಕೃತ ಖಾತೆಗೆ ವ್ಯಕ್ತಿಯೊಬ್ಬ ಬೆದರಿಕೆ ಇಮೇಲ್ ಕಳುಹಿಸಿರುವ ಪ್ರಸಂಗವೊಂದು ವರದಿಯಾಗಿದೆ.

ಇಮೇಲ್‌ ಖಾತೆಯಿಂದ ನವೆಂಬರ್ 13 ರಂದು ರಾತ್ರಿ 11:25ಕ್ಕೆ ಮೇಲ್ ರವಾನಿಸಿರುವ ಆರೋಪಿಯು ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಬಿಎಂಆರ್‍ಸಿಎಲ್ ಸಹಾಯಕ ನಿರ್ವಾಹಕ ಇಂಜಿನಿಯರ್ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಇಮೇಲ್ ಸಂದೇಶದಲ್ಲೇನಿದೆ?: ‘ಕೆಲಸದ ಅವಧಿ ಮುಗಿದ ನಂತರವೂ ನನ್ನ ವಿಚ್ಚೇದಿತ ಪತ್ನಿಗೆ ಮೆಟ್ರೋದ ಯಾವುದೇ ಉದ್ಯೋಗಿಗಳು ಮಾನಸಿಕ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದರೆ, ಎಚ್ಚರವಿರಲಿ. ನಿಮ್ಮ ನಿಲ್ದಾಣವೊಂದನ್ನು ಸ್ಪೋಟಿಸಲಾಗುತ್ತದೆ’ ಎಂದು ಆರೋಪಿ ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ.

ಆರೋಪಿ ಬಂಧನ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ..!

ಈ ಬೆದರಿಕೆಯ ಇಮೇಲ್ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು, ಆರೋಪಿ ರಾಜೀವ್(62) ಎಂಬಾತನನ್ನು ಬಂಧಿಸಿದ್ದಾರೆ. ಆತ ಮಾನಸಿಕವಾಗಿ ಅಸ್ವಸ್ಥನಿರುವ ಶಂಕೆಯಿದ್ದು, ಆರೋಪಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ ಯಾವ ಕಾರಣದಿಂದ ಬೆದರಿಕೆ ಮೇಲ್ ಕಳುಹಿಸಿದ್ದ ಎಂಬುದರ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News