ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
ಬೆಂಗಳೂರು : ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೋಮುದ್ವೇಷ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
2024ರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಪರೀಕ್ಷೆಯೊಂದನ್ನು ಬೆಳಗಿನ ಸಮಯದ ಬದಲಿಗೆ ಮಧ್ಯಾಹ್ನ ನಿಗದಪಡಿಸಿದ್ದಕ್ಕೆ ‘ನಮಾಝ್‌ಗೆ ಸಮಯ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ಇಡೀ ಪ್ರಕ್ರಿಯೆ ರದ್ದು ಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ರಜಾಕಾಲದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಎಸೆಸೆಲ್ಸಿ ಪರೀಕ್ಷಾ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಎಲ್ಲ ಪರೀಕ್ಷೆಗಳು ಬೆಳಗಿನ ಸಮಯದಲ್ಲಿ ನಿಗದಿ ಮಾಡಲಾಗಿದೆ. ಶುಕ್ರವಾರ ಏಕೆ? ಓಹ್.. ‘ನಮಾಝ್‌ಗೆ ಸಮಯ’ ಎಂದು ಸೂಲಿಬೆಲೆ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕೋಮು ದ್ವೇಷ ಏನಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತಲ್ಲದೆ, ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಿ ಆದೇಶಿಸಿತು. ಜತೆಗೆ, ಪ್ರತಿವಾದಿ ರಾಜ್ಯ ಸರಕಾರ ಆಕ್ಷೇಪ ಸಲ್ಲಿಸಲು ಮತ್ತು ಮಧ್ಯಂತರ ತಡೆ ತೆರವು ಕೋರುವ ಸ್ವಾತಂತ್ರ್ಯ ಹೊಂದಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.