ಕೇಂದ್ರ ಸರಕಾರದಿಂದ ಮನರೇಗಾ ಯೋಜನೆಯ ಹತ್ಯೆ : ಡಿ.ಕೆ.ಶಿವಕುಮಾರ್
ಹೊಸದಿಲ್ಲಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಧ್ಯಯನ ನಡೆಸಿ ಯುಪಿಎ ಸರಕಾರದ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಜಾರಿಗೆ ತಂದಿದ್ದರು. ಆದರೆ, ನರೇಂದ್ರ ಮೋದಿ ಸರಕಾರ ಗಾಂಧೀಜಿ ಹೆಸರನ್ನು ಬದಲಾವಣೆ ಮಾಡುವಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಕಾರ ಮನರೇಗಾ ಯೋಜನೆಯನ್ನು ಸಂವಿಧಾನ ಬದ್ಧವಾಗಿ ಜಾರಿಗೆ ತಂದಿತ್ತು. ಉದ್ಯೋಗ ಖಾತರಿಯನ್ನು ಸಂವಿಧಾನಿಕ ಹಕ್ಕಾಗಿ ನೀಡಿತ್ತು ಎಂದು ತಿಳಿಸಿದರು.
ಮಹಾತ್ಮಾ ಗಾಂಧಿ ಅವರ ಹೆಸರು ಬದಲಾವಣೆ ಮಾಡುತ್ತಿರುವುದು ನೋಡಿದರೆ ಕೇಂದ್ರ ಸರಕಾರದ ಅಂತಿಮ ದಿನಗಳ ಆರಂಭ ಎನ್ನಬಹುದು. ಕೇಂದ್ರ ಸರಕಾರ ಈ ಯೋಜನೆಯನ್ನು ಹತ್ಯೆ ಮಾಡುತ್ತಿದೆ. ಈ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲಿನ ಅನುಪಾತವನ್ನು 60:40ಕ್ಕೆ ಬದಲಾಯಿಸಿದ್ದು, ಬಿಜೆಪಿ ಆಡಳಿತ ರಾಜ್ಯ ಸರಕಾರಗಳು ಸೇರಿದಂತೆ ಯಾವುದೇ ರಾಜ್ಯ ಸರಕಾರಗಳು ಇದನ್ನು ಭರಿಸುವುದಿಲ್ಲ. ಇದರಿಂದಾಗಿ ಭವಿಷ್ಯದಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಗಲಿದೆ ಎಂದರು.
ವಿಜಯ್ ಹಜಾರೆ ಟ್ರೋಫಿ; ಪಂದ್ಯಕ್ಕೆ ಅನುಮತಿ ನಿರಾಕರಣೆ:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕೆ ಪೊಲೀಸರ ಅನುಮತಿ ನಿರಾಕರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನನಗೆ ಆ ವಿಚಾರ ಗೊತ್ತಿಲ್ಲ. ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಬೇಕು, ಗೌರವ ಉಳಿಯಬೇಕು ಎಂದು ಬಯಸುವವನು ನಾನು. ಮುಂದೆ ಮತ್ತೆ ಅನಾಹುತ ಆಗದಂತೆ ನೋಡಿಕೊಳ್ಳಲು ಯಾವ ಮಾನದಂಡ ನಿಗದಿ ಮಾಡಬಹುದು ಎಂದು ಚರ್ಚಿಸಲಾಗುವುದು. ಈ ವಿಚಾರವಾಗಿ ಗೃಹ ಸಚಿವರೊಂದಿಗೆ ಚರ್ಚಿಸುತ್ತೇನೆ. ಅವರು ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷರಾಗಿದ್ದವರು, ಅವರಿಗೂ ಅನುಭವವಿದೆ ಎಂದರು.