ಪಿಜಿ ವೈದ್ಯಕೀಯ: ಎರಡನೆ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ
ಬೆಂಗಳೂರು : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ನ ಎರಡನೆ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದ್ದು, ಎಂಸಿಸಿಯಲ್ಲಿ ಸೀಟು ಸಿಕ್ಕಿರುವವರು ಮೂಲ ದಾಖಲೆಗಳನ್ನು ಹಿಂಪಡೆಯಲು ಡಿ.24ರಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ.
ಮಂಗಳವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಒಟ್ಟು 3,164 ಅಭ್ಯರ್ಥಿಗಳಿಗೆ ಈ ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಿದ್ದು, ಸದರಿ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾತ್ಕಾಲಿಕ ಫಲಿತಾಂಶ ಪ್ರಕಟಣೆ ನಂತರ ಕೆಲವರು ಎಂಸಿಸಿ ಯಲ್ಲಿ ಸೀಟು ಸಿಕ್ಕಿದ್ದು, ಅಲ್ಲಿಯದೇ ಇಷ್ಟ ಎನ್ನುವವರು ಮೂಲ ದಾಖಲೆಗಳ ಸಮೇತ ಕೆಇಎ ಸೀಟು ಬಿಟ್ಟು ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕೆ ಕಟ್ಟಿರುವ ಶುಲ್ಕದಲ್ಲಿ 25 ಸಾವಿರ ರೂಪಾಯಿ ಕಡಿತ ಮಾಡಿಕೊಳ್ಳಲಾಗುವುದು. ಡಿ.23 ಬೆಳಿಗ್ಗೆ 11 ಗಂಟೆಯೊಳಗೆ ಮೂಲ ದಾಖಲೆ ವಾಪಸ್ ಪಡೆದವರನ್ನು ಬಿಟ್ಟು ಹೊಸದಾಗಿ ಸೀಟು ಹಂಚಿಕೆ ಮಾಡಿ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.
ಸೇವಾ ನಿರತ ಅಭ್ಯರ್ಥಿಗಳ ಫಲಿತಾಂಶ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸೇವಾ ನಿರತ ಅಭ್ಯರ್ಥಿಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಶುಲ್ಕ ಪಾವತಿಸಿದವರು ಡಿ.24ರೊಳಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಬಳಿಕ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಂಡು ಡಿ.26ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು. ಒಟ್ಟು 59 ಸೇವಾ ನಿರತ ಅಭ್ಯರ್ಥಿಗಳಿಗೆ ವಿವಿಧ ಕೋರ್ಸ್ ಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.