ಪ್ರಾರ್ಥನೆ, ಆರೋಗ್ಯ, ಶಿಕ್ಷಣ ಯಶಸ್ಸಿನ ಗುಟ್ಟು: ಮುಹಮ್ಮದ್ ಹುಮಾಯೂನ್ ನಾಗ್ತೆ
ಬೆಂಗಳೂರು : ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಪ್ರಾರ್ಥನೆ, ಆರೋಗ್ಯ ಹಾಗೂ ಶಿಕ್ಷಣದ ಮಹತ್ವವನ್ನು ಅರಿತು ಮುಂದುವರೆಯಬೇಕು ಎಂದು ಕೋಲಾರ ಜಿಲ್ಲೆಯ ಡಿವೈಎಸ್ಪಿ ಮುಹಮ್ಮದ್ ಹುಮಾಯೂನ್ ನಾಗ್ತೆ ಕಿವಿಮಾತು ಹೇಳಿದರು.
ರವಿವಾರ ನಗರದ ವೈಟ್‍ಫೀಲ್ಡ್ ಸಮೀಪದ ಕಾಡುಗೋಡಿ ಈದ್ಗಾ ಮೈದಾನದಲ್ಲಿ ಜಮೀಯತ್ ಉಲಮಾ ಹಿಂದ್ ಹಾಗೂ ಡಿಎಸ್‍ಎಫ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸೀರತ್ ಉನ್ ನಬೀ(ಸ) ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಯ ಅವಧಿಯನ್ನು ಅಮೂಲ್ಯವೆಂದು ಭಾವಿಸಬೇಕು. ಈ ಅವಧಿಯಲ್ಲಿ ನೀವು ಕಲಿಯುವಂತಹ ಆಚಾರ, ವಿಚಾರಗಳು ನಿಮ್ಮ ಭವಿಷ್ಯಕ್ಕೆ ಬುನಾದಿಯಾಗುತ್ತವೆ. ಶಿಕ್ಷಣವನ್ನು ಯಾವ ರೀತಿ ನೀವು ಬಳಸಿಕೊಳ್ಳುತ್ತೀರೋ ನಿಮ್ಮ ಭವಿಷ್ಯವು ಅದೇ ರೀತಿಯಲ್ಲಿರುತ್ತದೆ. ಆದುದರಿಂದ, ವಿದ್ಯಾರ್ಥಿಯಾಗಿರುವಾಗಲೆ ನಿಮ್ಮ ಗುರಿಯನ್ನು ನಿಗದಿಪಡಿಸಿಕೊಂಡು ಅದರಂತೆ ಮುಂದುವರೆಯಿರಿ ಎಂದು ಮುಹಮ್ಮದ್ ಹುಮಾಯೂನ್ ನಾಗ್ತೆ ಹೇಳಿದರು.
ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಚರಿತ್ರೆಯ ಆಧಾರದಲ್ಲಿ ಈ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿರುವುದು ಸ್ವಾಗತಾರ್ಹ. ಅಲ್ಲದೇ, ಈ ಸ್ಪರ್ಧೆಯಲ್ಲಿ ಕೇವಲ ಮುಸ್ಲಿಮರಷ್ಟೇ ಅಲ್ಲ, ಇತರ ವಿದ್ಯಾರ್ಥಿಗಳು ಭಾಗವಹಿಸಿರುವುದು ಅಭಿನಂದನಾರ್ಹ. ಇದರಿಂದ, ಸಮಾಜದಲ್ಲಿ ಸದ್ಭಾವನೆ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಅನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕು. ತಂತ್ರಜ್ಞಾನದ ಬಳಕೆ ನಮ್ಮ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು, ಅದು ವ್ಯವಸನವಾಗಿ ಪರಿವರ್ತನೆಯಾಗಲು ಅವಕಾಶ ನೀಡಬಾರದು ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಪೋಷಕರ ತ್ಯಾಗ, ಪರಿಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು. ಇದರಿಂದ, ನಿಮ್ಮ ಸಾಧನೆಗೆ ಮತ್ತಷ್ಟು ಸ್ಪೂರ್ತಿ ಸಿಗುತ್ತದೆ. ಪೋಷಕರು ಹಾಗೂ ಗುರುಗಳಿಗೆ ಗೌರವ ನೀಡುವುದರಿಂದ ನಿಮ್ಮಲ್ಲಿ ಉತ್ತಮ ಗುಣಗಳು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಡಿಎಸ್‍ಎಫ್ ಸಂಸ್ಥಾಪಕ ಡಾ.ಸೈಯದ್ ಮುಝಮ್ಮಿಲ್ ಅಹ್ಮದ್ ಮಾತನಾಡಿ, ನಮ್ಮ ಸಂಘಟನೆ ವತಿಯಿಂದ 2014ರಿಂದ ಈವರೆಗೆ 87 ಸಾವಿರ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಿದ್ದೇವೆ. ಇಂದಿನ ರಸಪ್ರಶ್ನೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲರಿಗೂ ಬಹುಮಾನಗಳನ್ನು ನೀಡಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕಗಳಿಸುವ ವಿದ್ಯಾರ್ಥಿಗಳಿಗೆ 25 ಸಾವಿರ ರೂ.ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಡಿಎಸ್‍ಎಫ್ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ತಬ್ರೇಝ್, ಪದಾಧಿಕಾರಿಗಳಾದ ಸೈಯದ್ ಅಮ್ಜದ್, ಚಾಂದ್, ಫಿರ್ದೋಸ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.