×
Ad

ಅಂಧರ ಸಾಹಿತ್ಯದಲ್ಲಿ ಆದರ್ಶ ಸಮಾಜದ ಆಶಯವಿದೆ : ಪ್ರೊ.ಬರಗೂರು ರಾಮಚಂದ್ರಪ್ಪ

ಅಖಿಲ ಕರ್ನಾಟಕ ಅಂಧರ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ

Update: 2025-12-27 23:48 IST

ಬೆಂಗಳೂರು : ಅಂಧ ಸಾಹಿತ್ಯದ ಅನೇಕ ರಚನೆಗಳು ನಮ್ಮ ಸಮಾಜಕ್ಕೆ ಬೇರೆಯವರು ಹೇಗೆ ಸ್ಪಂಧಿಸುತ್ತಾ ಬಂದಿದ್ದಾರೆಯೋ ಹಾಗೆಯೇ ಸ್ಪಂಧಿಸುತ್ತಾ ಬಂದಿವೆ. ಅಂಧ ಸಾಹಿತಿಗಳು ಬರೆದಿರುವ ರಚನೆಯಲ್ಲಿ ಆತ್ಮ ವಿಶ್ವಾಸ, ಪ್ರೀತಿ-ಪ್ರೇಮ, ಸಾಮಾಜಿಕ ಕಳಕಳಿ, ಮಾನವೀಯತೆಯನ್ನು ಕಾಣುತ್ತೇವೆ. ಬಹುಪಾಲು ಆದರ್ಶ ಸಮಾಜವನ್ನು ಬಯಸುವ ಆಶಯಗಳನ್ನು ನೋಡುತ್ತೇವೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ ವತಿಯಿಂದ ನಗರದ ಸಮರ್ಥನಂ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಅಂಧರ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಅಂಧರಾಗಿರುವ ಅನೇಕರು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ನೋಡುವುದಕ್ಕೆ ಸಾಧ್ಯ ಇಲ್ಲದಿರುವುದು ದೊಡ್ಡ ಸವಾಲು. ಅದನ್ನು ಮೀರುವ ಪ್ರಯತ್ನ ಮಾಡುವುದು ಅದ್ಬುತ ಪ್ರಯತ್ನವಾಗಿದೆ ಎಂದರು.

ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಮಾತನಾಡಿ, ಅಂಗವಿಕಲರ ಬಗ್ಗೆ ಸಮಾಜ ಸರಿಯಾದ ದೃಷ್ಟಿಯಿಂದ ನೋಡಬೇಕು. ಅವರನ್ನು ಗೌರವದಿಂದ ಕಾಣಬೇಕು. ಅಂಧರು ಸಾಹಿತ್ಯದ ಕಡೆಗೆ ಒಲವು ಮೂಡಿಸಿಕೊಂಡಿರುವುದು ಸಮಾಧಾನದ ಸಂಗತಿ. ಅಂಧ ಸಾಹಿತಿಗಳಿಂದ ಅನೇಕ ಕೃತಿಗಳು ಬರಲು ಅವಕಾಶವಿದೆ. ನಿಮ್ಮ ಅನುಭವ ಬಹಳ ದೊಡ್ಡದು. ಆಧುನಿಕ ತಂತ್ರಜ್ಞಾನದಿಂದ ಪತ್ರಿಕೆಗಳನ್ನು ಸುಲಭವಾಗಿ ಓದಬಹುದು. ಆಧುನಿಕ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಅಂಧರು ಜಗತ್ತನ್ನು ಲೋಕಕ್ಕೆ ತಿಳಿಸಬೇಕಿರುವುದನ್ನು ತಿಳಿಸಬೇಕು ಎಂದರು.

ಇದೇ ವೇಳೆ ಅಂಧ ಲೇಖಕರು ರಚಿಸಿದ ಏಳು ಪುಸ್ತಕಗಳು ಹಾಗೂ ಬರಗೂರು ರಾಮಚಂದ್ರಪ್ಪ ಅವರು ಸಂಪಾದಿಸಿದ ಕುವೆಂಪು ವಿಚಾರ ಕ್ರಾಂತಿ ಪುಸ್ತಕದ ಬ್ರೈಲ್‍ಲಿಪಿಯ ಕೃತಿಯನ್ನು ಜನಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್, ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ, ಜಿ.ಕೆ.ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನದ ನಿರ್ಣಯಗಳು

ಅಂಗವಿಕಲರ ಸಮಗ್ರ ಅಧ್ಯಯನಕ್ಕಾಗಿ ಪ್ರತ್ಯೇಕ ಆಯೋಗ ರಚಿಸಬೇಕು. ಗಾನಯೋಗಿ ಪುಟ್ಟರಾಜ ಗವಾಯಿಗಳ ಸಮಗ್ರ ಸಾಹಿತ್ಯದ ಪ್ರಕಟಿಸಬೇಕು. ಕಬ್ಬನ್ ಉದ್ಯಾನದಲ್ಲಿರುವ ಬ್ರೈಲ್ ವಿಭಾಗವನ್ನು ಪ್ರತ್ಯೇಕ ಗ್ರಂಥಾಲಯವಾಗಿ ಉನ್ನತೀಕರಿಸಬೇಕು. ರಾಜ್ಯ ಸರಕಾರದ ವಿವಿಧ ಅಕಾಡಮಿ ಹಾಗೂ ಪ್ರಾಧಿಕಾರಗಳಲ್ಲಿ ಅಂಧ ಸದಸ್ಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News