×
Ad

ಹಿಂದಿ ಎಂಬ ಭೂತ ಓಡಿಸಲು ದ್ವಿಭಾಷಾ ನೀತಿ, ಸಂವಿಧಾನ ತಿದ್ದುಪಡಿ ಆಗಲಿ : ಆನಂದ ಗುರು

ಕನ್ನಡ ಚಳುವಳಿಗಾರರ ಸಮಿತಿ ವತಿಯಿಂದ ವಿಚಾರ ಸಂಕಿರಣ

Update: 2025-12-28 22:00 IST

ಬೆಂಗಳೂರು : ನಮ್ಮ ರಾಜ್ಯದಿಂದ ಹಿಂದಿ ಎಂಬ ಭೂತವನ್ನು ಓಡಿಸಲು ರಾಜ್ಯ ಸರಕಾರ ಕಟ್ಟುನಿಟ್ಟಾಗಿ ದ್ವಿಭಾಷಾ ನೀತಿ ಜಾರಿಗೊಳಿಸುವ ಜತೆಗೆ ಸಂವಿಧಾನ ತಿದ್ದುಪಡಿ ಆಗಬೇಕು ಎಂದು ಕನ್ನಡಪರ ಹೋರಾಟಗಾರ ಆನಂದ ಗುರು ಒತ್ತಾಯಿಸಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಕನ್ನಡ ಚಳುವಳಿಗಾರರ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ‘ಹಿಂದಿ ಹೇರಿಕೆ ಮತ್ತು ದ್ವಿಭಾಷಾ ನೀತಿ; ಕುರಿತು ವಿಷಯ ಮಂಡನೆ ಮಾಡಿದ ಅವರು, ದೇಶದಲ್ಲಿ ಹಿಂದಿ ಭಾಷೆಯನ್ನು ಉತ್ತೇಜಿಸಬೇಕು. ಹಿಂದಿ ಅಭಿವೃದ್ಧಿಪಡಿಸುವುದು ಕೇಂದ್ರ ಸರಕಾರದ ಕರ್ತವ್ಯ ಎಂಬ ನಿರ್ದೇಶನವು ಸಂವಿಧಾನದ ಕಲಂ 351ರಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ಕನ್ನಡಿಗರ ಮೇಲೆ ಹಿಂದಿ ಹೇರಿಕೆ ತಡೆಯಲು ಸಂವಿಧಾನ ತಿದ್ದುಪಡಿ ಆಗಬೇಕು ಎಂದು ಉಲ್ಲೇಖಿಸಿದರು.

ದಿನನಿತ್ಯ ನಮ್ಮ ಭಾಷೆಯನ್ನು ಪ್ರತಿ ಹಂತದಲ್ಲೂ ತುಳಿಯುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಇತ್ತೀಚಿಗೆ ಕನ್ನಡ ನಾಡಿನ ರೈಲ್ವೆ ವಿಭಾಗ ಹುದ್ದೆಗಳ ನೇಮಕಕ್ಕೆ ಕನ್ನಡ ತೆಗೆದು ಹಿಂದಿ ಭಾಷೆ ಪರೀಕ್ಷೆ ಮಾತ್ರ ಇಡಲಾಗಿದೆ. ಈ ಮೂಲಕ ಕನ್ನಡ ನಾಡಿನ ಉದ್ಯೋಗಕ್ಕಾಗಿ ಕನ್ನಡಿಗರು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

ಇತ್ತೀಚಿಗೆ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳಲ್ಲೂ ಕನ್ನಡಿಗರ ಕೆಲಸಕ್ಕಾಗಿ ಭಿಕ್ಷೆ ಬೇಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯಕ್ಕೆ ಅನಿಯಂತ್ರಿತ ವಲಸೆ ಆಗುತ್ತಿದೆ. ತ್ರಿಭಾಷಾ ನೀತಿ, ಉದ್ಯೋಗದಲ್ಲಿ ಹಿಂದಿ ಭಾಷಿಕರಿಗೆ ಆದ್ಯತೆ ಮತ್ತು ಹಿಂದಿ ಹೇರಿಕೆ ಮೂಲಕ ಅನಿಯಂತ್ರಿತ ವಲಸೆಗೆ ಉತ್ತೇಜಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಈ ಮೂಲಕ ಕನ್ನಡವನ್ನು ವ್ಯವಸ್ಥಿತವಾಗಿ, ಹಂತ ಹಂತವಾಗಿ ಮುಗಿಸುವ ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ನಮ್ಮ ಮೇಲೆ ಹಿಂದಿ ಹೇರುವವರು, ಎಲ್ಲೇ ಹೋದರೂ ಹಿಂದಿ ಮಾತನಾಡಿ ಎನ್ನುವವರೇ ದೇಶ ದ್ರೋಹಿಗಳು. ಭಾರತಕ್ಕೆ ಒಂದು ದೇಶ, ಒಂದು ಭಾಷೆ ಎನ್ನುವಂತೆ ಆಗಬಾರದು. ದ್ವಿಭಾಷಾ ನೀತಿ ಜಾರಿಯಾಗಬೇಕು. ಮೂರನೆ ಭಾಷೆ ಬೇಕು ಎನ್ನುವವರಿಗೆ ಅದನ್ನು ಕಲಿಯುವ ಅವಕಾಶ ಸಿಗಬೇಕು. ಅನಗತ್ಯವಾಗಿ ಹಿಂದಿ ಕಲಿಯಬೇಕು ಎನ್ನುವ ಒತ್ತಡ ಹೇರಬಾರದು ಎಂದು ಆನಂದ ಗುರು ಹೇಳಿದರು.

ಉತ್ತರ ಕರ್ನಾಟಕ ಜಿಲ್ಲೆಗಳ ತಲಾದಾಯ ಉತ್ತರ ಭಾರತ ರಾಜ್ಯಗಳ ತಲಾದಾಯದಷ್ಟಿದೆ : ಬಿ.ಸಿ.ಬಸವರಾಜ್

ರಾಜ್ಯದ ಮೇಲೆ ಒಕ್ಕೂಟ ಸರಕಾರದ ದಬ್ಬಾಳಿಕೆ ವಿಷಯ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಬಿ.ಸಿ.ಬಸವರಾಜ್, ಈಗಾಗಲೇ ಉತ್ತರ ಕರ್ನಾಟಕ ಜಿಲ್ಲೆಗಳ ತಲಾದಾಯ ಉತ್ತರ ಭಾರತ ರಾಜ್ಯಗಳ ತಲಾದಾಯದಷ್ಟಿದೆ. ಹೀಗೆ, ಮುಂದುವರೆದರೆ ಕನ್ನಡಿಗರು, ಅದರಲ್ಲೂ ಗ್ರಾಮಾಂತರ ಭಾಗದ ಕನ್ನಡಿಗರಿಗೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಇದರ ನಡುವೆ ಮ-ನರೇಗಾ ಯೋಜನೆಯನ್ನು ಬದಲಿಸಿ ಜಿ ರಾಮ್ ಜಿ ಯೋಜನೆಯಾಗಿ ಪರಿವರ್ತಿಸಿರುವುದರಿಂದ ಕನ್ನಡಿಗರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದರು.

ರೈಲು, ಬ್ಯಾಂಕ್, ಖಾಸಗಿ ಉದ್ಯೋಗಗಳು ಅನ್ಯರ ಪಾಲಾಗುತ್ತಿವೆ : ಮುನೀರ್ ಕಾಟಿಪಳ್ಳ

‘ಕನ್ನಡಿಗರ ಉದ್ಯೋಗ ಮತ್ತು ಬದುಕಿನ ಪ್ರಶ್ನೆ’ ವಿಷಯ ಕುರಿತು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ, ಬಂದರು, ವಿಮಾನ ನಿಲ್ದಾಣ, ಬೃಹತ್ ಕೈಗಾರಿಕೆಗಳಿಗೆ ಜಮೀನು ನೀಡುವ ಕನ್ನಡಿಗರಿಗೇ ಉದ್ಯೋಗ ಇಲ್ಲದಂತಾಗಿದೆ. ಒಟ್ಟಿನಲ್ಲಿ ಕನ್ನಡ ನಾಡಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ವ್ಯಾಪಾರ, ಉದ್ಯಮ, ಕೃಷಿ ಎಲ್ಲಾ ಕ್ಷೇತ್ರಗಳು ಕನ್ನಡಿಗರ ಕೈ ತಪ್ಪುತ್ತಿವೆ. ರೈಲು, ಬ್ಯಾಂಕ್, ಖಾಸಗಿ ಉದ್ಯೋಗಗಳು ಅನ್ಯರ ಪಾಲಾಗುತ್ತಿವೆ. ಸಾರ್ವಜನಿಕ ಉದ್ಯಮಗಳಲ್ಲಿ ಬರೀ ಗುತ್ತಿಗೆ ಕೆಲಸಗಳು ಉಳಿಯುತ್ತಿವೆ ಎಂದರು.

ಮಂಗಳೂರಿನ ಎಂಆರ್‍ಪಿಎಲ್‍ನಲ್ಲಿ ಕನ್ನಡಿಗರಿಗೆ ಉದ್ಯೋಗ ವಂಚನೆ ವಿಚಾರವಾಗಿ ಹೋರಾಟ ಮಾಡಲಾಯಿತು. ಈ ರೀತಿ ಕನ್ನಡ ನಾಡಿನ ಪ್ರತಿಯೊಂದು ಉದ್ಯೋಗಕ್ಕೂ ಕನ್ನಡಿಗರು ಹೋರಾಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಷಡ್ಯಂತ್ರ ನಡೆದಿದೆ : ಕೆ.ನೀಲಾ

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ನಗರ ವಾಸಿಗಳಿಗೂ ಉದ್ಯೋಗ ಖಾತರಿ ನೀಡಬೇಕು. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಷಡ್ಯಂತ್ರ ನಡೆದಿದೆ. ಕನ್ನಡವೂ ರಾಷ್ಟ್ರೀಯ ಭಾಷೆ. ಯಾವ ಭಾಷೆಯು ಶ್ರೇಷ್ಠ, ಕನಿಷ್ಠವಲ್ಲ. ನಮ್ಮ ನಾಡಿನ ಸಂಪತ್ತನ್ನು ಹೊತ್ತೊಯ್ದು ಬೇರೆಯವರಿಗೆ ಹಂಚುತ್ತಿರುವುದನ್ನು ಪ್ರಶ್ನಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News