ಬೆಂಗಳೂರು | ಬೀಡಾ ಅಂಗಡಿ ಧ್ವಂಸ: ಪ್ರಕರಣ ದಾಖಲು
ಬೆಂಗಳೂರು: ಆರೋಪಿಗಳ ಗುಂಪೊಂದು ಬೀಡಾ ಅಂಗಡಿಗೆ ನುಗ್ಗಿ ಧ್ವಂಸಗೊಳಿಸಿರುವ ಘಟನೆ ಇಲ್ಲಿನ ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ವರದಿಯಾಗಿದೆ.
ಡಿ.28ರ ರಾತ್ರಿ 9 ಗಂಟೆಯ ಸುಮಾರಿಗೆ 10ಕ್ಕೂ ಹೆಚ್ಚು ಆರೋಪಿಗಳ ಗುಂಪು ಬೀಡಾ ಅಂಗಡಿಗೆ ನುಗ್ಗಿ ಹಳೇ ವೈಷ್ಯಮ್ಯಕ್ಕೆ ಬಶೀರ್ ಎಂಬಾತ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅಂಗಡಿಯನ್ನು ಧ್ವಂಸಗೊಳಿಸಿರುವುದಾಗಿ ತಿಳಿದುಬಂದಿದೆ.
ಒಂದೂವರೆ ವರ್ಷದ ಹಿಂದೆ ಬಶೀರ್ ಹಾಗೂ ವೆಂಕಟೇಶ್ ಎಂಬಾತನ ನಡುವೆ ಗಲಾಟೆಯಾಗಿತ್ತು. ಇದನ್ನೇ ಮನಸಿನಲ್ಲಿ ಇಟ್ಟುಕೊಂಡಿದ್ದ ವೆಂಕಟೇಶ್ ಡಿ.28ರ ರಾತ್ರಿ ಕಾರಿನಲ್ಲಿ ಕುಳಿತಿದ್ದ ಬಶೀರ್ ಹಾಗೂ ಆತನ ಸ್ನೇಹಿತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಮೊದಲು ಕಾರಿನ ಗಾಜು ಪುಡಿ ಮಾಡಿದ್ದಾರೆ, ಇದರಿಂದ ಭಯಗೊಂಡ ಬಶೀರ್ ಹಾಗೂ ಆತನ ಸ್ನೇಹಿತ ಅಲ್ಲಿಂದ ಓಡಿ ನೇರವಾಗಿ ಸಮೀಪದಲ್ಲಿದ್ದ ಬೀಡಾ ಅಂಗಡಿಗೆ ಹೋಗಿದ್ದಾರೆ. ಇದನ್ನೂ ಗಮನಿಸಿದ ಆರೋಪಿಗಳು, ಅಂಗಡಿಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು, ಘಟನೆಗೆ ಸಂಬಂಧಪಟ್ಟಂತೆ ಗಾಯಾಳು ಬಶೀರ್‍ನ ತಾಯಿ ಮತ್ತು ಅಂಗಡಿ ಮಾಲಕರು ಸೇರಿ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.