×
Ad

5ನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ; ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಕರ್ನಾಟಕವನ್ನು ಪ್ರತಿನಿಧಿಸಿದ ಡಾ.ಶಾಲಿನಿ ರಜನೀಶ್

Update: 2025-12-29 23:25 IST

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇತ್ತೀಚೆಗೆ ಡಿ.26 ರಿಂದ 28ರವರೆಗೆ ಹೊಸದಿಲ್ಲಿಯಲ್ಲಿ ನಡೆದ ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಈ ಸಮ್ಮೇಳನವು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳ ಕುರಿತು ರಚನಾತ್ಮಕ ಮತ್ತು ನಿರಂತರ ಸಂವಾದದ ಮೂಲಕ ಕೇಂದ್ರ-ರಾಜ್ಯ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿತ್ತು.

ಸಹಕಾರಿ ಒಕ್ಕೂಟ ಪರಿಕಲ್ಪನೆಯ ಭಾಗವಾಗಿ, ಈ ಸಮ್ಮೇಳನವು ಕೇಂದ್ರ ಮತ್ತು ರಾಜ್ಯಗಳು ಸಹಕರಿಸುವ ಮಹತ್ವದ ವೇದಿಕೆಯಾಗಿದ್ದು, ದೇಶದ ಮಾನವ ಸಂಪನ್ಮೂಲ ಸಾಮರ್ಥ್ಯ ವನ್ನು ಹೆಚ್ಚಿಸಲು ಹಾಗೂ ಸಮಗ್ರ ಭವಿಷ್ಯಕ್ಕಾಗಿ ಸುಸ್ಥಿರ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಏಕೀಕೃತ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ಈ ಸಮ್ಮೇಳನವು ‘ವಿಕಸಿತ ಭಾರತಕ್ಕಾಗಿ ಮಾನವ ಬಂಡವಾಳ’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಸರಿಸಬೇಕಾದ ಅತ್ಯುತ್ತಮ ವಿಧಾನಗಳು ಮತ್ತು ತಂತ್ರಗಳನ್ನು ಪ್ರಸ್ತಾಪಿಸಿದೆ.

ಸಮ್ಮೇಳನದಲ್ಲಿ ಆರಂಭಿಕ ಬಾಲ್ಯ ಶಿಕ್ಷಣ, ಶಾಲಾ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉನ್ನತ ಶಿಕ್ಷಣ, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಐದು ಪ್ರಮುಖ ಕ್ಷೇತ್ರಗಳ ವಿಷಯಗಳ ಮೇಲೆ ವಿವರವಾದ ಚರ್ಚೆಗೆ ವಿಶೇಷ ಒತ್ತು ನೀಡಲಾಯಿತು. ಅಲ್ಲದೆ ‘ಆಡಳಿತದಲ್ಲಿ ತಂತ್ರಜ್ಞಾನ-ಅವಕಾಶಗಳು, ಅಪಾಯಗಳು ಮತ್ತು ತಗ್ಗಿಸುವಿಕೆ’, ಸ್ಮಾರ್ಟ್ ಪೂರೈಕೆ ಸರಪಳಿಗಳು, ‘ಒಂದು ರಾಜ್ಯ-ಒಂದು ವಿಶ್ವದರ್ಜೆಯ ಪ್ರವಾಸಿ ತಾಣ’, ಆತ್ಮನಿರ್ಭರ ಭಾರತ ಹಾಗೂ ಸ್ವದೇಶಿ ಚಿಂತನೆಗಳು ಸೇರಿದಂತೆ ಆರು ಮಹತ್ವದ ವಿಷಯಗಳನ್ನೂ ಕೇಂದ್ರೀಕರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News