ಬಿಡದಿ ಟೌನ್‍ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹ
ಬೆಂಗಳೂರು : ಫಲವತ್ತಾದ ಕೃಷಿ ಭೂಮಿಯಲ್ಲಿ ಉದ್ದೇಶಿತ ಬಿಡದಿ ಟೌನ್‍ಶಿಪ್ ಯೋಜನೆ ರೈತ ವಿರೋಧಿ ಹಾಗೂ ಪರಿಸರಕ್ಕೆ ವಿನಾಶಕಾರಿ. ಇಂತಹ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು ಸರಕಾರ ಹಿಂಪಡೆಯಬೇಕು ಮತ್ತು ಯೋಜನೆಗಾಗಿ ಸುಮಾರು 9,640ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.
ಸೋಮವಾರ ಗಾಂಧಿ ಭವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಡಾ.ಸಿದ್ದನಗೌಡ ಪಾಟೀಲ್, ನೂರ್ ಶ್ರೀಧರ್, ಟಿ.ಯಶವಂತ, ಪಿ.ಪಿ.ಅಪ್ಪಣ್ಣ, ಪ್ರಕಾಶ್ ಸೇರಿದಂತೆ ರೈತರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 25 ಗ್ರಾಮಗಳ ಸುಮಾರು 9,640 ಎಕರೆ ಕೃಷಿ ಭೂಮಿಯು ನೀರಾವರಿ ಹೊಂದಿರುವ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು, ಬೆಳೆಯುತ್ತಿರುವ ಸಮೃದ್ಧ ಹಸಿರು ಪ್ರದೇಶವಾಗಿದೆ ಎಂದರು.
ಈ ಪ್ರದೇಶವು ಜಿಬಿಎ ಗಡಿಗೆ ಹೊಂದಿಕೊಂಡಂತೆ ಇದ್ದು ಬೆಂಗಳೂರು ಮಹಾನಗರಕ್ಕೆ ಹಾಲು, ಹಣ್ಣು, ತರಕಾರಿ ಮುಂತಾದ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಅಮೂಲ್ಯ ಆಹಾರದ ಕಣಜವಾಗಿದೆ. ಇಲ್ಲಿನ ಎಲ್ಲ ಕೃಷಿ ಕುಟುಂಬಗಳು ತಮ್ಮ ಸಣ್ಣ ಹಿಡುವಳಿಯಲ್ಲೇ ಮಿಶ್ರ ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ಅಡಿಕೆ ತಟ್ಟೆ ತಯಾರಿಕೆ ಮುಂತಾದ ಕೃಷಿ ಆಧಾರಿತ ಸಣ್ಣ ಉದ್ದಿಮೆಗಳನ್ನು ಕಟ್ಟಿಕೊಂಡು ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಇಂತಹ ಸುಸ್ಥಿರ ಬದುಕಿನ ಮೇಲೆ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೋರಾಟಗಾರರು ತಿಳಿಸಿದರು.
ಜಿಬಿಎ ಅನುಷ್ಠಾ ನಗೊಳಿಸುತ್ತಿರುವ ಬಿಡದಿ ಸಮಗ್ರ ಉಪ ನಗರ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 17(1)ರ ಅಡಿಯಲ್ಲಿ 2025ರ ಮಾ.13 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣವೇ ಸುಮಾರು 3,500ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಈ ಭೂ ಸ್ವಾಧೀನಕ್ಕೆ ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇದುವರೆಗೂ ಈ ಯಾವ ರೈತರ ಆಕ್ಷೇಪಣೆಗಳನ್ನು ಸರಕಾರ ಆಲಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒಂದೂವರೆ ವರ್ಷದಿಂದ ವಿವಿಧ ಮಾದರಿಯಲ್ಲಿ ತಮ್ಮ ಬಲವಾದ ವಿರೋಧವನ್ನು ಇಲ್ಲಿನ ರೈತರು ದಾಖಲಿಸಿದ್ದು, 428ಕ್ಕೂ ಹೆಚ್ಚು ದಿನಗಳಿಂದ ಅನಿರ್ದಿಷ್ಟಾ ವಧಿ ಧರಣಿ ನಡೆಸುತ್ತಾ ಬಂದಿದ್ದರೂ ಭಾದಿತ ರೈತರ ಜೊತೆ ಯಾವುದೇ ಸಮಾಲೋಚನೆ ನಡೆಸದೇ ಸಂಪುಟ ಅನುಮೋದನೆ ನೀಡಿರುವುದು ರೈತರ ಪ್ರಜಾಪ್ರಭುತ್ವ ಹಕ್ಕುಗಳ ನಗ್ನ ಉಲ್ಲಂಘನೆ ಹಾಗೂ ಸರ್ವಾಧಿಕಾರಿ ಕ್ರಮ. ಕೂಡಲೇ ಸಿದ್ದರಾಮಯ್ಯ ಸರಕಾರ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
‘ಸರಕಾರದ ರೈತ ವಿರೋಧಿ ನಡೆಯಿಂದಾಗಿ ಬಿಡದಿ ಮತ್ತೊಂದು ದೇವನಹಳ್ಳಿ ಹೋರಾಟ ಆಗಲಿದೆ. ಇದೇ ವೇಳೆ ಸಿದ್ದರಾಮಯ್ಯ ಸರಕಾರಕ್ಕೆ ಮೂರು ವರ್ಷ ತುಂಬಲಿದೆ. ಬಿಡದಿ ಟೌನ್‍ಶಿಪ್ ಯೋಜನೆಗೆ ರೈತರು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ. ಸರಕಾರ, ರಾಜಧಾನಿಯನ್ನು ಬಂಡವಾಳಿಗರ ಬೆಂಗಳೂರು ಮಾಡಲಿಕ್ಕೆ ಹೊರಟಿದೆ. ಇದರ ವಿರುದ್ಧ ಹೋರಾಟ ನಡೆಯಬೇಕಾಗುತ್ತದೆ. ಬಂಡವಾಳಿಗರ ಪರ ಆಡಳಿತ ನಡೆಸಿದ್ದೇ ಆದಲ್ಲಿ, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ. ಬಿಡದಿ ಟೌನ್‍ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು’
-ನೂರ್ ಶ್ರೀಧರ್ ಸಂಯುಕ್ತ ಹೋರಾಟ ಕರ್ನಾಟಕ
‘ಕೃಷಿ ಪ್ರದೇಶವನ್ನು ನಾಶ ಮಾಡಿ ನಿರ್ಮಾಣಗೊಂಡ ಬಡಾವಣೆಗಳು ಅಗತ್ಯ ಮೂಲಭೂತ ಸೌಕರ್ಯಗಳು ಇಲ್ಲದೇ ಬೆಂಗಳೂರು ಮಹಾನಗರದ ಭೂತಾಪಮಾನವನ್ನು ಗಣನೀಯವಾಗಿ ಹೆಚ್ಚಿಸಿ ರಿಯಲ್ ಎಸ್ಟೇಟ್ ಕಾಂಕ್ರಿಟ್ ಕಾಡಾನ್ನಾಗಿಸಿದೆ. ಲಕ್ಷಾಂತರ ನಿವೇಶನಗಳು, ನೂರಾರು ಅಪಾರ್ಟ್‍ಮೆಂಟ್‍ಗಳು ಖಾಲಿ ಬಿದ್ದಿವೆ. ಇಂತಹ ದುಸ್ಥಿತಿಯನ್ನು ವಿಸ್ತರಿಸಿ ಮಹಾನಗರದ ಜನ ಜೀವನವನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸುವ ಬಿಡದಿ ಟೌನ್‍ಶಿಪ್ ನಂತಹ ಪರಿಸರ ವಿರೋಧಿ ಂಜನೆಗಳನ್ನು ಪರಿಸರವಾದಿಗಳು, ಸಾಹಿತಿಗಳು, ನೀತಿ-ನಿರೂಪಕರು ಸೇರಿದಂತೆ ಎಲ್ಲ ಕಾಳಜಿಯುಳ್ಳ ನಾಗರಿಕರು ವಿರೋಧಿಸಬೇಕು’
-ಬಡಗಲಪುರ ನಾಗೇಂದ್ರ ಸಂಯುಕ್ತ ಹೋರಾಟ ಕರ್ನಾಟಕ